ಉದಯವಾಹಿನಿ, ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಹಸೀನಾ ಸರ್ಕಾರ ವಿರುದ್ಧ ವಿದ್ಯಾರ್ಥಿಗಳ ದಂಗೆ ಸಮಯದಲ್ಲಿ ಮುನ್ನಲೆಗೆ ಬಂದಿದ್ದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಗುರುವಾರ ತಡರಾತ್ರಿ ಸಿಂಗಾಪುರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುದ್ದಿ ತಿಳಿದು, ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ಬೀದಿಗಿಳಿದಿದ್ದು, ಬಾಂಗ್ಲಾದೇಶದ ಎರಡು ಪ್ರಮುಖ ಪತ್ರಿಕೆಗಳ ಕಚೇರಿಗಳಿಗೆ ನುಗ್ಗಿದ್ದಾರೆ.
ಹಾದಿ ಸಾವಿನ ಸುದ್ದಿ ತಿಳಿದ ತಕ್ಷಣ ಢಾಕಾದ ಕಾರ್ವಾನ್ ಬಜಾರ್ ಪ್ರದೇಶದಲ್ಲಿ ದೇಶದ ಪ್ರಮುಖ ಬಂಗಾಳಿ ಭಾಷೆಯ ಪ್ರೋಥೋಮ್ ಅಲೋ ದಿನಪತ್ರಿಕೆಯ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನಾಕಾರರ ಗುಂಪು ಜಮಾಯಿಸಿತು. ಬಳಿಕ ಅವರು ಕಟ್ಟಡಕ್ಕೆ ನುಗ್ಗಿದರು. ಜನಸಮೂಹವು ಒಂದು ದಿನಪತ್ರಿಕೆಯ ಕಟ್ಟಡಕ್ಕೆ ಬೆಂಕಿ ಹಚ್ಚಿದೆ. ಈ ಸಂದರ್ಭದಲ್ಲಿ ಪತ್ರಕರ್ತರು ಮತ್ತು ಇತರ ಸಿಬ್ಬಂದಿ ಕಟ್ಟಡದ ಒಳಗೆ ಸಿಲುಕಿದ್ದರು ಎಂದು ವರದಿಯಾಗಿದೆ.
ನೂರಾರು ಪ್ರತಿಭಟನಾಕಾರರು ಢಾಕಾ ವಿಶ್ವವಿದ್ಯಾಲಯದ ಆವರಣದ ಬಳಿಯ ಶಹಬಾಗ್ ಚೌಕದಲ್ಲಿ ರ‍್ಯಾಲಿ ನಡೆಸಿ, ಹಾದಿ ಪರ ಘೋಷಣೆಗಳನ್ನು ಕೂಗಿದರು. ದೇಶದ ಬೇರೆಡೆಯೂ ಇದೇ ರೀತಿಯ ಪ್ರತಿಭಟನೆಗಳು ನಡೆದಿದೆ. ಷರೀಫ್ ಉಸ್ಮಾನ್ ಹಾದಿ ನಿಧನದ ಘೋಷಣೆ ಬೆನ್ನಲ್ಲೇ ನೂರಾರು ವಿದ್ಯಾರ್ಥಿಗಳು ಮತ್ತು ಜನರು ಢಾಕಾ ವಿಶ್ವವಿದ್ಯಾಲಯ ಆವರಣದ ಬಳಿ ಜಮಾಯಿಸಿ, ಘೋಷಣೆ ಕೂಗಿದರು. ದೇಶದ ಹಲವೆಡೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಶಾಂತತೆ ಕಾಯ್ದುಕೊಳ್ಳುವಂತೆ ಹಂಗಾಮಿ ಸರ್ಕಾರದ ಮುಖ್ಯಸ್ಥ ಯೂನಸ್ ಜನರಿಗೆ ಮನವಿ ಮಾಡಿದ್ದಾರೆ.
ದೇಶದಲ್ಲಿ ಫೆಬ್ರವರಿ 12ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಹಾದಿ ಕೂಡ ಪ್ರಮುಖ ಅಭ್ಯರ್ಥಿಯಾಗಿದ್ದರು. ಕಳೆದ ಶುಕ್ರವಾರ ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದಾಗ ಮುಸುಕುಧಾರಿ ಬಂದೂಕುಧಾರಿಗಳು ಅವರ ಮೇಲೆ ಗುಂಡು ಹಾರಿಸಿದ್ದರು. ಹಾದಿ ಆರೋಗ್ಯ ಬಿಗಡಾಯಿಸಿದಂತೆ ಮೊಹಮ್ಮದ್ ಯೂನಸ್ ಸರ್ಕಾರ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಸಿಂಗಾಪುರಕ್ಕೆ ರವಾನಿಸಿತ್ತು.
