ಉದಯವಾಹಿನಿ, ವಾಷಿಂಗ್ಟನ್: ಬ್ರೌನ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ ಶಂಕಿತನಿಗೆ ಅಮೆರಿಕಕ್ಕೆ ಬರಲು ಅನುವು ಮಾಡಿಕೊಟ್ಟ ಗ್ರೀನ್ ಕಾರ್ಡ್ ಲಾಟರಿ ಕಾರ್ಯಕ್ರಮವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸ್ಥಗಿತಗೊಳಿಸಿದ್ದಾರೆ. ಟ್ರಂಪ್ ನಿರ್ದೇಶನದ ಮೇರೆಗೆ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ ಇಲಾಖೆಗೆ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್, ಇಂತಹ ಕ್ರೂರ ವ್ಯಕ್ತಿಯನ್ನು ನಮ್ಮ ದೇಶಕ್ಕೆ ಬರಲು ಎಂದಿಗೂ ಅನುಮತಿಸಬಾರದಿತ್ತು ಎಂದು ಶಂಕಿತ ದಾಳಿಕೋರ ಪೋರ್ಚುಗೀಸ್ ಪ್ರಜೆ ಕ್ಲಾಡಿಯೊ ನೆವೆಸ್ ವ್ಯಾಲೆಂಟೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೌನ್ ವಿಶ್ವವಿದ್ಯಾಲಯದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿ, ಒಂಬತ್ತು ಮಂದಿ ಗಾಯಗೊಂಡಿದ್ದರು ಹಾಗೂ ಎಂಐಟಿ ಪ್ರಾಧ್ಯಾಪಕರೊಬ್ಬರ ಹತ್ಯೆಯಲ್ಲಿ ನೆವ್ಸ್ ವ್ಯಾಲೆಂಟೆ(48) ಭಾಗಿಯಾಗಿರುವ ಬಗ್ಗೆ ಶಂಕಿಸಲಾಗಿದೆ. ನಂತರ ಗುರುವಾರ ಸಂಜೆ ಆತ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನೆವ್ಸ್ ವ್ಯಾಲೆಂಟೆ 2017 ರಲ್ಲಿ ಕಾನೂನುಬದ್ಧ ಶಾಶ್ವತ ನಿವಾಸ ಸ್ಥಾನಮಾನವನ್ನು ಪಡೆದರು ಎಂದು ಮ್ಯಾಸಚೂಸೆಟ್ಸ್ ಅಮೆರಿಕದ ಅಟಾರ್ನಿ ಲಿಯಾ ಬಿ. ಫೋಲೆ ಹೇಳಿದ್ದಾರೆ. ಡೈವರ್ಸಿಟಿ(ವೈವಿಧ್ಯತೆ) ವೀಸಾ ಪ್ರೋಗ್ರಾಮ್ ಮೂಲಕ ಪ್ರತಿ ವರ್ಷ ಅಮೆರಿಕದಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ದೇಶಗಳ ಜನರಿಗೆ ಲಾಟರಿ ಮೂಲಕ 50 ಸಾವಿರ ಗ್ರೀನ್ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ಪೈಕಿ ಬಹುತೇಕ ರಾಷ್ಟ್ರಗಳು ಆಫ್ರಿಕಾದಲ್ಲಿವೆ. ಅಮೆರಿಕದ ಕಾಂಗ್ರೆಸ್ ಈ ಲಾಟರಿ ವ್ಯವಸ್ಥೆಯನ್ನು ರಚಿಸಿದೆ. ಈ ಕ್ರಮವು ಕಾನೂನು ಸವಾಲು ಎದುರಿಸುವುದು ಬಹುತೇಕ ಖಚಿತವಾಗಿದೆ.
