ಉದಯವಾಹಿನಿ, ರಾಮನಗರ: ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದು ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಿಸಿರುವ ಘಟನೆ ಮಾಗಡಿ ತಾಲೂಕಿನ ಹಾಲಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ರೇವಣ್ಣ ಎಂಬವರ ತೋಟದ ಬಾವಿಗೆ ಚಿರತೆ ಬಿದ್ದಿತ್ತು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು 5 ವರ್ಷದ ಹೆಣ್ಣು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ಬೋನ್ ಹಾಗೂ ಬಲೆ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಮೇಲೆತ್ತಿದ್ದಾರೆ.
ಬಾವಿಗೆ ಬಿದ್ದ ರಭಸಕ್ಕೆ ಚಿರತೆಯ ತಲೆಭಾಗಕ್ಕೆ ಪೆಟ್ಟು ಬಿದ್ದಿದೆ. ಸದ್ಯ ಚಿರತೆಯನ್ನ ಬನ್ನೇರುಘಟ್ಟ ರೆಸ್ಕ್ಯೂ ಸೆಂಟರ್‌ಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಸಿಎಫ್ ಪುಟ್ಟಮ್ಮ ಹಾಗೂ ಆರ್‌ಎಫ್‌ಓ ಚೈತ್ರಾ ಮನ್ಸೂರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
