ಉದಯವಾಹಿನಿ, ಹಾಸನ: ಮಹಿಳೆಯೊಬ್ಬರ ಎಡಗಾಲಲ್ಲಿದ್ದ ರಾಡ್ ತೆಗೆಯಲು ಬಲಗಾಲಿಗೆ ಆಪರೇಷನ್ ಮಾಡಿರುವುದು ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಜಿಲ್ಲಾಸ್ಪತ್ರೆ ವೈದ್ಯ ಸಂತೋಷ್ ಈ ಯಡವಟ್ಟು ಮಾಡಿದ್ದಾರೆ. ಮಹಿಳೆಯ ಎಡಗಾಲಿನಲ್ಲಿ ಅಳವಡಿಸಿದ್ದ ರಾಡ್ ತೆಗೆಯಲು ವೈದ್ಯರು ಬಲಗಾಲನ್ನು ಕೊಯ್ದಿದ್ದಾರೆ. ಈ ವೇಳೆ ವೈದ್ಯರಿಗೆ ತಮ್ಮ ತಪ್ಪಿನ ಅರಿವಾಗಿದೆ. ಬಳಿಕ ಎಡಗಾಲಿಗೆ ಆಪರೇಷನ್ ಮಾಡಿ ರಾಡ್ ತೆಗೆದಿದ್ದಾರೆ.
ಎರಡುವರೆ ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಚಿಕ್ಕಮಗಳೂರು ಬೂಚನಹಳ್ಳಿ ಕಾವಲು ಗ್ರಾಮದ ಜ್ಯೋತಿಯವರ ಎಡಗಾಲಿಗೆ ಪೆಟ್ಟಾಗಿತ್ತು. ಈ ವೇಳೆ ವೈದ್ಯರು ರಾಡ್ ಅಳವಡಿಸಿದ್ದರು. ಇತ್ತೀಚಿಗೆ ಕಾಲಿಗೆ ಅಳವಡಿಸಿದ್ದ ರಾಡ್‍ನಿಂದ ಜ್ಯೋತಿಯವರಿಗೆ ನೋವು ಕಾಣಿಸಿಕೊಳ್ಳುತ್ತಿತ್ತು. ಬಳಿಕ ಅವರು ಹಿಮ್ಸ್ ಆಸ್ಪತ್ರೆಯ ವೈದ್ಯ ಸಂತೋಷ್ ಬಳಿ ತೋರಿಸಿದ್ದರು. ಅವರು ರಾಡ್ ತೆಗೆಸುವಂತೆ ಹೇಳಿದ್ದರು.
ವೈದ್ಯರ ಸಲಹೆಯಂತೆ ಹಿಮ್ಸ್ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದರು. ಈಗ ವೈದ್ಯರ ಯಡವಟ್ಟಿನಿಂದ ಮಹಿಳೆಯ ಎರಡೂ ಕಾಲುಗಳಿಗೆ ಗಾಯವಾಗಿದ್ದು, ಓಡಾಡಲು ಸಾಧ್ಯವಾಗದೇ ಹಾಸಿಗೆಯಲ್ಲೇ ಮಲಗಿದ್ದಾರೆ. ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆಯ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
