ಉದಯವಾಹಿನಿ, ಬೆಂಗಳೂರು: ಅಭಿವೃದ್ಧಿ ಶೂನ್ಯತೆ ಹಾಗೂ ರಸ್ತೆ ಗುಂಡಿಯ ವಿಷಯವನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ದೃಷ್ಟಿಯಿಂದ ರಾಜ್ಯದ ಎಲ್ಲ ಕಡೆ ರಸ್ತೆ ತಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾಂಕೇತಿಕವಾಗಿ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರವು ಜನವಿರೋಧಿಯಾಗಿದ್ದು, ಆಡಳಿತದಲ್ಲಿ ವಿಫಲವಾಗಿದೆ. ಜನರನ್ನು ಬೆದರಿಸುವ ಸರ್ಕಾರವಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ವರ್ತನೆಯನ್ನು ಖಂಡಿಸಿ ಮತ್ತು ತಕ್ಷಣ ರಸ್ತೆಗಳ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಸಂಪೂರ್ಣವಾಗಿ ಅಭಿವೃದ್ಧಿ ಕುಂಠಿತವಾಗಿದೆ. ರಸ್ತೆಗಳು ಎಲ್ಲೆಡೆ ಸಂಪೂರ್ಣವಾಗಿ ಹಾಳಾಗಿವೆ. ಎಲ್ಲ ಕಡೆ ಗುಂಡಿಯಲ್ಲಿ ರಸ್ತೆ ಇದೆ. ಇಷ್ಟೊಂದು ತೆರಿಗೆ ಹೇರಿದ ಮೇಲೂ ಹೀಗಾಗಿದೆ. ಬೆಲೆ ಏರಿಕೆ, ತೆರಿಗೆಗಳ ಮೂಲಕ ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 1.5 ಲಕ್ಷ ಕೋಟಿ ರೂ. ಆದಾಯ ಪಡೆದುಕೊಂಡಿದೆ. ಗ್ಯಾರಂಟಿಗೆ 90 ಸಾವಿರ ಕೋಟಿ ರೂ. ಖರ್ಚಾಗಿರಬಹುದು.
