ಉದಯವಾಹಿನಿ , ಬೆಂಗಳೂರು: ಮಕ್ಕಳ ಮೇಲೆ ಹಲ್ಲೆ ಮಾಡಿ ಕ್ರೌರ್ಯ ಪ್ರದರ್ಶಿಸುತ್ತಿದ್ದ ಸೈಕೋ ರಂಜನ್ ವಿರುದ್ಧ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಲು ಮುಂದಾಗಿದ್ದಾರೆ.
ಈತ ತ್ಯಾಗರಾಜ ನಗರದ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಆಟವಾಡುತ್ತಿದ್ದ 5 ವರ್ಷದ ಮಗುವನ್ನು ಕಾಲಿನಿಂದ ಒದ್ದು ವಿಕೃತಿ ಮೆರೆದಿದ್ದ. ಒದ್ದ ಏಟಿಗೆ ಮಗು ದೂರಕ್ಕೆ ಮುಗ್ಗರಸಿ ಬಿದ್ದಿತ್ತು. ಬಿದ್ದ ರಭಸಕ್ಕೆ ಮಗುವಿನ ಹಣೆ, ಕಣ್ಣಿನ ಭಾಗ, ಕೈ-ಕಾಲುಗಳಲ್ಲಿ ರಕ್ತ ಸ್ರಾವವಾಗಿತ್ತು. ಈ ಸಂಬಂಧ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆ ವೇಳೆ ಸೈಕೋ ರಂಜನ್ ಮಕ್ಕಳ ಮೇಲೆ ನಡೆಸಿರೋ ವಿಕೃತಿಯ ಸಾಲು ಸಾಲು ಘಟನೆಗಳು ಬೆಳಕಿಗೆ ಬಂದಿವೆ. ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ತಲೆ ಕೂದಲು ಹಿಡಿದು ಗರಗರನೇ ತಿರುಗಿಸಿ ಹಲ್ಲೆ ನಡೆಸಿದ್ದ. ಹೀಗೆ ಒಂದು ವಾರದ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ವಿಪರ್ಯಾಸ ಅಂದರೆ ಇಷ್ಟೆಲ್ಲಾ ಘಟನೆಗಳು ನಡೆದಿದ್ದರೂ ಯಾವುದೇ ಮಕ್ಕಳ ಪೋಷಕರು, ಯಾವುದೇ ದೂರು ನೀಡಿರಲಿಲ್ಲ. ಈಗಾಗಲೇ ಒಂದು ಪ್ರಕರಣದಲ್ಲಿ ಆರೋಪಿಯನ್ನು ವಿಚಾರಣೆ ನಡೆಸಲಾಗಿದೆ. ಸದ್ಯ ಆರೋಪಿ ಸ್ಟೇಷನ್ ಬೇಲ್ ಪಡೆದು ಚೆನೈಗೆ ತೆರಳಿದ್ದಾನೆ. ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
