ಉದಯವಾಹಿನಿ, ದಕ್ಷಿಣ ಕ್ಯಾಲಿಫೋರ್ನಿಯಾದ ‘ರಂಗಧ್ವನಿ ತಂಡ’ ಗಿರೀಶ್ ಕಾರ್ನಾಡ್ ಅವರ ಹಯವದನ (Hayavadana) ನಾಟಕವನ್ನು ಬೆಂಗಳೂರಿನ ಬೆನಕ ತಂಡದ ಸಹಾಯದೊಂದಿಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಿಗೆ ಪ್ರಸ್ತುತ ಪಡಿಸಿ, ಒಂದು ಹೊಸ ಅನುಭವವನ್ನೇ ಕೊಟ್ಟಿತ್ತು. ಇದು ಥಾಮಸ್ ಮಾನ್ ಅವರ “The Transposed Heads”ನಲ್ಲಿ ಹಳೆಯ “ಬೇತಾಳ ಪಂಚವಿಂಶತಿ” ಕಥೆಯ ಪುನರ್ನಿರ್ಮಾಣದಿಂದ ತೆಗೆದುಕೊಳ್ಳಲ್ಪಟ್ಟಿದೆ. ತನ್ನದೇ ಆದ ವಿಶಿಷ್ಟ ಅಲಂಕಾರಗಳೊಂದಿಗೆ ರಂಗಸಜ್ಜಿಕೆಮಾಡಿ, ಪ್ರೇಕ್ಷಕರ ಮೆಚ್ಚುಗೆ ಪಡೆದ ಹಾಗೂ ಒಂದರ ಹಿಂದೆ ಒಂದರಂತೆ ವಾರಾಂತ್ಯದಲ್ಲಿ 3 ಪ್ರದರ್ಶನಗಳನ್ನು (2 housefull shows) ನೀಡಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಈ ಹಿಂದೆ ಇದೇ ರಂಗಧ್ವನಿ ತಂಡ ಬೆನಕ ತಂಡದ ‘ಜೋಕುಮಾರಸ್ವಾಮಿ’, ‘ಸತ್ತವರ ನೆರಳು’ ನಾಟಕಗಳನ್ನು ಅಮೆರಿಕೆಯ ಕನ್ನಡಿಗರಿಗೆ ಯಶಸ್ವೀ ಪರ್ದರ್ಶನಗಳನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದಿದೆ.

ಬೆನಕ ತಂಡದ ಮಾಜಿ ಸದಸ್ಯರೂ ಆದ ವಲ್ಲೀಶ ಶಾಸ್ತ್ರಿಗಳು ಮೂಲ ಬಿ ವಿ ಕಾರಂತರ ಹಾಡುಗಳನ್ನೇ ಇಟ್ಟುಕೊಂಡು ರಂಗದ ಮೇಲೆ ತಂದು ಅನಿವಾಸಿ ಕನ್ನಡಿಗರಿಗೊಂದು ಕೊಡುಗೆಯಾಗಿ ಕೊಟ್ಟಿದ್ದಾರೆ. ವಲ್ಲೀಶ ಶಾಸ್ತ್ರಿ ಅವರ ಮರು ನಿರ್ದೇಶನದಲ್ಲಿ ಮೂಡಿ ಬಂದ ಈ ನಾಟಕದ ಮುಖ್ಯ ಕಥೆಯಲ್ಲಿ ಪದ್ಮಿನಿ (ಪೂರ್ಣಿಮ ಶ್ರೀನಿವಾಸ್ /ಶ್ರೀಲಕ್ಷ್ಮಿ ಆನಂದ್) ಮತ್ತು ಅವಳ ಜೀವನದ ದೇವದತ್ತ (ಶ್ರಿನಿವಾಸ ರಾವ್) ಹಾಗೂ ಕಪಿಲ (ವೆಂಕಟೇಶ್ ಚಕ್ರವರ್ತಿ) ಇಬ್ಬರು ಪುರುಷರ ನಡುವೆ ಕೇಂದ್ರ ಬಿಂದುವಾಗಲಿರುವ ಮನಸ್ಸು ಹಾಗೂ ದೇಹದ ಆಟಗಳು ಪ್ರೇಕ್ಷಕನಲ್ಲಿ ಚರ್ಚೆಯನ್ನೇ ಹುಟ್ಟುಹಾಕುತ್ತದೆ. ನಾಟಕದಲ್ಲಿ ಸಂಗೀತ, ಹಾಡು ಮತ್ತು ನೃತ್ಯದ ಅಳವಡಿಕೆಯು ಕಥೆಯನ್ನು ಹೇಳುವ ವಿಧಾನವನ್ನು ಹೆಚ್ಚು ಆಕರ್ಷಕವಾಗಿಸುತ್ತದೆ. ಕತೆ ಕಟ್ಟುವ ಕ್ರಮ, ನಾಟಕೀಯ ದೃಶ್ಯಗಳು ಮತ್ತು ಹಾಡುಗಳು ನಾಟಕಕ್ಕೆ ಹೆಚ್ಚಿನ ಮೆರಗು ನೀಡುತ್ತವೆ.

Leave a Reply

Your email address will not be published. Required fields are marked *

error: Content is protected !!