ಉದಯವಾಹಿನಿ, ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿ ಇದೀಗ ‘ಬಿಗ್ ಬಾಸ್’ನ 12ನೇ ಸೀಸನ್ ಹೊತ್ತು ತಂದಿದೆ (BBK 12). ಕಳೆದ 11 ವರ್ಷಗಳಿಂದ ಕನ್ನಡಿಗರನ್ನು ಯಶಸ್ವಿಯಾಗಿ ರಂಜಿಸುತ್ತ ಬಂದಿರುವ ‘ಬಿಗ್ ಬಾಸ್’ ರಿಯಾಲಿಟಿ ಶೋ,ಈ ಬಾರಿ “Expect the Unexpected” ಎಂಬ ಥೀಮ್‌ನಲ್ಲಿ ಹಲವು ಅನಿರೀಕ್ಷಿತಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮನರಂಜನೆಯ ಹೊಸ ಭಾಷ್ಯವನ್ನು ಬರೆಯಲು ಸಜ್ಜಾಗಿದೆ.
ಸೆಪ್ಟೆಂಬರ್ 28ರ ಸಂಜೆ 6 ಗಂಟೆಗೆ ಬಿಗ್ ಬಾಸ್ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ಪ್ರಸಾರವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ರಾತ್ರಿ 9 ಗಂಟೆಯಿಂದ ಪ್ರಸಾರವಾಗಲಿದೆ. ಈ ಸೀಸನ್‌ನಲ್ಲಿ ವಿಭಿನ್ನ ವ್ಯಕ್ತಿತ್ವದ ಕಂಟೆಸ್ಟೆಂಟ್ಸ್, ಹಾಗೂ ಅನಿರೀಕ್ಷಿತ ಟಾಸ್ಕ್‌ಗಳನ್ನು ಹೊತ್ತು ನವರಾತ್ರಿ ಹಬ್ಬದ ಹೊಸ್ತಿಲಲ್ಲಿರುವ ಕರ್ನಾಟಕಕ್ಕೆ ನವ ಸಂಭ್ರಮ ತರಲಿದೆ. ‘ಬಿಗ್ ಬಾಸ್’ ಹೊಸ ಸೀಸನ್ ಅಂದ್ಮೇಲೆ ವಿಶೇಷ ಇರಲೇಬೇಕು.
ಬಿಗ್ ಬಾಸ್ ಬಗ್ಗೆ ನಮಗೆ ಎಲ್ಲ ಗೊತ್ತಿದೆ. ಅಲ್ಲಿ ಯಾವಾಗ ಏನ್ ಆಗುತ್ತೆ ಅನ್ನೋ ಅರಿವೂ ನಮಗೆ ಚೆನ್ನಾಗಿ ಇದೆ ಅಂತ ಹೇಳೊರಿಗೆ, ಪ್ರೋಮೊ ಮೂಲಕ “ಓಹ್.. ಭ್ರಮೆ!” ಅಂತ ಕಿಚ್ಚ ಸುದೀಪ್ ಸ್ವೀಟ್ ಆಗಿ ಉತ್ತರ ಕೊಟ್ಟಿದಾರೆ. ಈ ಸೀಸನ್‌ನ ಪ್ರೋಮೊಗಳು ಸುದ್ದಿ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ‘10 ಮಿಲಿಯನ್’ಗೂ ಹೆಚ್ಚು ವ್ಯೂವ್ಸ್ ಮಾಡುವ ಮೂಲಕ ಸದ್ದು ಮಾಡಿವೆ. ಎಐ ತಂತ್ರಜ್ಞಾನವನ್ನು ಬಳಸಿ ಹೇಳಿರುವ ಕತೆ ಮತ್ತು ಸುದೀಪ್ ಅವರ ಹೊಸ ಲುಕ್ ಹಾಗೂ ಸ್ಟೈಲ್ ಎಲ್ಲೆಡೆ ಹೊಸ ಅಲೆಯನ್ನೇ ಎಬ್ಬಿಸಿದೆ.ಒಂದು ಕಡೆ ಇಡೀ ಕರ್ನಾಟಕ ಹೊಸ ಸೀಸನ್‌ಗಾಗಿ ಕಾಯುತ್ತಿದ್ದರೆ, ಮತ್ತೊಂದು ಕಡೆ ಕಿಚ್ಚ ಅವರನ್ನು ವಿಭಿನ್ನ ಕಾಸ್ಟ್ಯೂಮ್ಸ್‌ಗಳಲ್ಲಿ ನೋಡಲು ಕಾಯ್ತ ಇದಾರೆ. ಮೈ ನವಿರೇಳಿಸೋ ಟಾಸ್ಕ್ಸ್, ಅನಿರೀಕ್ಷಿತ ಎಮೋಷನ್ಸ್ ಹುಟ್ಟುಹಾಕೋ ಸಂದರ್ಭ, ವಾರದಿಂದ ವಾರಕ್ಕೆ ಹೆಚ್ಚಾಗೋ ಟ್ವಿಸ್ಟ್ಸ್ ಮತ್ತು ಟರ್ನ್ಸ್, ಹೊಸ ಪ್ರಪಂಚವನ್ನೇ ಸೃಷ್ಟಿಸಲು ಸಜ್ಜುಗೊಳ್ಳುತ್ತಿವೆ.
