ಉದಯವಾಹಿನಿ, ನೋಯ್ಡಾ: ನಿಯಮಿತವಾಗಿ ಉಬರ್ ಸವಾರಿ ಮಾಡುತ್ತಿದ್ದ 5 ಮಹಿಳೆಯರಿಗೆ ಭಯಾನಕ ಅನುಭವವಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಉಬರ್ ಚಾಲಕ ಆಕ್ರಮಣಕಾರಿಯಾಗಿ ವರ್ತಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಬೊಟಾನಿಕಲ್ ಗಾರ್ಡನ್‌ನಿಂದ ತಮ್ಮ ಕಚೇರಿಗೆ ಕ್ಯಾಬ್ ಬುಕ್ ಮಾಡಿದ್ದ ಮಹಿಳೆಯರು, ಬೇರೆ ಮಾರ್ಗ ತೆಗೆದುಕೊಳ್ಳಿ ಎಂದು ಹೇಳಿದಾಗ ಈ ಘಟನೆ ಸಂಭವಿಸಿದೆ.ಸವಾರಿಯ ಸಮಯದಲ್ಲಿ, ಮಹಿಳೆಯೊಬ್ಬರು ಟ್ರಾಫಿಕ್ ತಪ್ಪಿಸಲು ಬೇರೆ ಮಾರ್ಗವನ್ನು ತೆಗೆದುಕೊಳ್ಳುವಂತೆ ಚಾಲಕನನ್ನು ಕೇಳಿಕೊಂಡರು. ಇದನ್ನು ಚಾಲಕ ನಿರಾಕರಿಸಿದನು. ಅಲ್ಲದೆ ಅವಹೇಳನಕಾರಿ ಮಾತುಗಳನ್ನಾಡಲು ಪ್ರಾರಂಭಿಸಿದನು ಎಂದು ವರದಿಯಾಗಿದೆ. ಮಹಿಳೆ ಕಾರನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಅವನು ಹಣಕ್ಕೆ ಬೇಡಿಕೆ ಇಟ್ಟನು. ಹಣ ಕೊಡುವುದಕ್ಕೆ ನಿರಾಕರಿಸಿದ್ದಕ್ಕೆ ಕಾರನ್ನು ನಿಲ್ಲಿಸಿದ ಚಾಲಕ, ಕಾರಿನಿಂದ ಇಳಿದು ಡಿಕ್ಕಿ ತೆರೆದು ಪೈಪ್‌ನಿಂದ ಬೆದರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಘಟನೆಯಿಂದ ಮಹಿಳೆಯರು ಭಯಭೀತರಾದರು ಮತ್ತು ಆಘಾತಗೊಂಡಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಚಾಲಕ ಬ್ರಜೇಶ್ ಕುಮಾರ್‌ನನ್ನು ಬಂಧಿಸಲಾಯಿತು. ಹಾಗೆಯೇ ಆತನ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‍ನಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ ವಿಡಿಯೊ ನೋಡಿದ ನೆಟ್ಟಿಗರು ಕೂಡ ಆಘಾತಕೊಂಡಿದ್ದಾರೆ.
