ಉದಯವಾಹಿನಿ, ಲಡಾಖ್: ಲೇಹ್ ಜಿಲ್ಲೆಯ ಲಡಾಖ್‌ನಲ್ಲಿ ನಡೆದ ಬೃಹತ್ ಹಿಂಸಾಚಾರದಲ್ಲಿ ಕಾಂಗ್ರೆಸ್ ಕೌನ್ಸಿಲರ್ ಫುಂಟ್ಸಾಗ್ ಸ್ಟ್ಯಾನ್ ಜನ್ ತ್ಸೆಪಾಗ್ ಭಾಗಿಯಾಗಿದ್ದರು. ಅವರು ಹಿಂಸಾತ್ಮಕ ಗುಂಪಿನೊಂದಿಗೆ ಕಾಣಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ. ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಮತ್ತು ಅವರ ಪ್ರಚೋದನಕಾರಿ ಭಾಷಣಗಳ ಈ ಹಿಂಸಾಚಾರಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂಸಾಚಾರದಲ್ಲಿ ನಾಲ್ವರು ಪ್ರತಿಭಟನಾಕಾರರು ಸಾವನ್ನಪ್ಪಿದ್ದು, 90 ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಬಳಿಕ ಲೇಹ್ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಲಡಾಖ್‌ಗೆ ರಾಜ್ಯ ಸ್ಥಾನಮಾನ ಮತ್ತು ಸಾಂವಿಧಾನಿಕ ರಕ್ಷಣೆಗಾಗಿ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಉಂಟಾದ ಹಿಂಸಾಚಾರದ ಬಳಿಕ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕರ್ಫ್ಯೂ ಜಾರಿಯಲ್ಲಿದೆ. ಸ್ಥಳೀಯ ಪೊಲೀಸರ ಜೊತೆಗೆ ಸಿಆರ್‌ಪಿಎಫ್ ಕೂಡ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇಂಡೋ-ಟಿಬೆಟಿಯನ್ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಘಟನೆಯಲ್ಲಿ ಲಡಾಖ್‌ನ ಬಿಜೆಪಿ ಕಚೇರಿ ಮತ್ತು ಲಡಾಖ್ ಹಿಲ್ ಕೌನ್ಸಿಲ್ ಸೆಕ್ರೆಟರಿಯೇಟ್ ಅನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದ್ದರು. ಈ ಘಟನೆಗೆ ಬಿಜೆಪಿಯು ಕಾಂಗ್ರೆಸ್ ಅನ್ನು ದೂಷಿಸಿದೆ. ಕಾಂಗ್ರೆಸ್ ಕೌನ್ಸಿಲರ್ ತ್ಸೆಪಾಗ್ ಹಿಂಸಾತ್ಮಕ ಗುಂಪಿನ ಭಾಗವಾಗಿದ್ದಾರೆ ಎಂಬ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಾಂಗ್‌ಚುಕ್, ಲಡಾಖ್‌ನಲ್ಲಿ ಕಾಂಗ್ರೆಸ್‌ಗೆ 5,000 ಯುವಕರನ್ನು ರಸ್ತೆಗೆ ಇಳಿಸುವಷ್ಟು ಪ್ರಭಾವವಿಲ್ಲ ಎಂದು ಹೇಳಿದ್ದಾರೆ.ಲಡಾಖ್‌ನ ಲೆಫ್ಟಿನೆಂಟ್ ಗವರ್ನರ್ ಕವಿಂದರ್ ಗುಪ್ತಾ ಅವರು ಪ್ರತಿಕ್ರಿಯಿಸಿ, ಈ ಘರ್ಷಣೆಯು ಒಂದು ಪಿತೂರಿ. ಹಿಂಸಾಚಾರದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
