ಉದಯವಾಹಿನಿ, ಹೊಸಡೆಲ್ಲಿ: ನಟಿ ಸಾರಾ ಅಲಿ ಖಾನ್ ಅವರಿಗೆ ಟ್ರೋಲ್ ಕಾಟ ಹೊಸದೇನೂ ಅಲ್ಲ. ಸೈಫ್ ಅಲಿ ಖಾನ್ ಪುತ್ರಿ ಎಂಬ ಕಾರಣಕ್ಕೆ ಬಾಲಿವುಡ್ನಲ್ಲಿ ಅವರಿಗೆ ಸುಲಭವಾಗಿ ಅವಕಾಶಗಳು ಸಿಕ್ಕವು. ಆದರೆ ಅಷ್ಟು ಸುಲಭವಾಗಿ ಗೆಲುವು ಸಿಗಲಿಲ್ಲ. ನೆಪೋಟಿಸಂ ಸಹಾಯದಿಂದ ಬೆಳೆದ ಸ್ಟಾರ್ ಕಲಾವಿದರ ಮಗಳು ಎಂದು ಅವರನ್ನು ಹೀಯಾಳಿಸಲಾಗುತ್ತದೆ. ಅಲ್ಲದೆ ಸಾರಾ ಅಲಿ ಖಾನ್ ಅವರ ದೈವ ಭಕ್ತಿಯ ಬಗ್ಗೆಯೂ ಟೀಕೆ ಎದುರಾಗುತ್ತದೆ. ಇತ್ತೀಚೆಗೆ ಅವರು ಹಿಂದೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಆಗ ಅವರನ್ನು ಟ್ರೋಲ್ ಮಾಡಲಾಗಿತ್ತು. ಅದಕ್ಕೆ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೂಗಳು ಆರಾಧಿಸುವ ಈ ಕ್ಷೇತ್ರಗಳಿಗೆ ಸಾರಾ ಅಲಿ ಖಾನ್ ತೆರಳಿದ್ದು ಸರಿಯಲ್ಲ ಎಂದು ಒಂದು ವರ್ಗದ ಜನರು ಅವರನ್ನು ಟ್ರೋಲ್ ಮಾಡಿದ್ದರು. ಅಂಥವರಿಗೆ ಸಾರಾ ತಿರುಗೇಟು ನೀಡಿದ್ದಾರೆ. ‘ಇದು ನಿಮಗೆ ಸರಿ ಎನಿಸಿದರೆ ಓಕೆ. ನಿಮಗೆ ಇಷ್ಟ ಆಗುತ್ತಿಲ್ಲ ಎಂದ ಮಾತ್ರಕ್ಕೆ ನಾನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸುವುದಿಲ್ಲ’ ಎಂದು ಸಾರಾ ಆಲಿ ಖಾನ್ ಹೇಳಿದ್ದಾರೆ.
