ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದು, ಸುಮಾರು 90 ನಿಮಿಷಗಳ ಕಾಲ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಭಾಗಿಯಾಗಲು ಅಮೆರಿಕ ಪ್ರವಾಸದಲ್ಲಿರುವ ಷರೀಫ್ ಅವರಿಂದು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮುನ್ನವೇ ಸೇನಾ ಮುಖಸ್ಥರೊಟ್ಟಿಗೆ ಟ್ರಂಪ್ ಅವರನ್ನ ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಭದ್ರತೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅನೇಕ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಭಯೋತ್ಪಾದನೆ ನಿಗ್ರಹ ಒಪ್ಪಂದಕ್ಕೂ ಸಹಿ ಮಾಡಲಾಗಿದ್ದು, ಪರಸ್ಪರ ಸಹಕಾರದೊಂದಿಗೆ ಮುಂದುವರಿಯಲು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ.
ಉಭಯ ದೇಶಗಳ ಒಪ್ಪಂದಗಳು ಭದ್ರತೆ, ಆರ್ಥಿಕತೆ, ಕಾರ್ಯತಂತ್ರದ ಪಾಲುದಾರಿಕೆ, ಭಯೋತ್ಪಾದನಾ ನಿಗ್ರಹ ಹಾಗೂ ಪಾಕ್‌ನಲ್ಲಿ (Pakistan) ಖನಿಜ ಸಂಪತ್ತಿನ ಶೋಧನೆ ತೈಲ ಪರಿಶೋಧನೆಯನ್ನು ಕೇಂದ್ರೀಕರಿಸಿತ್ತು. ಜೊತೆಗೆ ಬಾಗ್ರಾಮ್ ವಾಯುನೆಲೆ ಹಾಗೂ ಆ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವದ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ
