ಉದಯವಾಹಿನಿ, ನವದೆಹಲಿ: ಕೆಲಸದ ಪರವಾನಗಿ, ಇತರ ಗುರುತಿನ ದಾಖಲೆಗಳಿತ್ತು. ಆದರೂ ಪಾಸ್‌ಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಅಮೆರಿಕದಿಂದ (America) ಕೈಕೋಳ, ಕಾಲುಗಳನ್ನು ಕಟ್ಟಿ ಗಡಿಪಾರು ಮಾಡಲಾಯಿತು ಎಂಬುದಾಗಿ 71 ವರ್ಷದ ಪಂಜಾಬ್ (Punjab) ಹರ್ಜಿತ್ ಕೌರ್ (Harjit Kaur) ಹೇಳಿಕೊಂಡಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಈ ಸಮಯದಲ್ಲಿ ತಿನ್ನಲು ಸಾಧ್ಯವಾಗದ ಆಹಾರವನ್ನು ನೀಡಲಾಗಿತ್ತು. ನನ್ನ ಕುಟುಂಬ ಅಮೆರಿಕದಲ್ಲಿದೆ. ಅವರನ್ನು ನಾನು ಸೇರಬೇಕು. 30 ವರ್ಷಗಳಿಗೂ ಹೆಚ್ಚು ಕಾಲ ನಾನು ಅಮೆರಿಕದಲ್ಲಿದ್ದೆ. ಆದರೆ ಕಾರಣವನ್ನೂ ಕೂಡ ಹೇಳದೆ ನನ್ನನ್ನು ಗಡಿಪಾರು ಮಾಡಲಾಯಿತು ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. 1991ರಿಂದ ಅಮೆರಿಕದಲ್ಲಿ ವಾಸಿಸುತ್ತಿರುವ ಕೌರ್, ಪಾಸ್‌ಪೋರ್ಟ್ ಇಲ್ಲದ ಕಾರಣಕ್ಕಾಗಿ 2012ರಲ್ಲಿ ಪ್ರಾರಂಭವಾದ ಅವರ ಗಡಿಪಾರು ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿತ್ತು. 2012ರಿಂದ ನನ್ನ ಗಡೀಪಾರು ನಡೆಯುತ್ತಿರುವುದರಿಂದ ನಾನು ಸಹಿ ಹಾಕಲು ಹೋದಾಗ ಸೆಪ್ಟೆಂಬರ್ 8ರಂದು ಅವರು ನನ್ನನ್ನು ಬಂಧಿಸಿದರು. ಕೆಲಸದ ಪರವಾನಗಿ ಇತ್ತು, ನಾನು ತುಂಬಾ ತೆರಿಗೆ ಕೂಡ ಪಾವತಿಸಿದ್ದೆ. ಆದರೂ ನನ್ನನ್ನು ಗಡಿಪಾರು ಮಾಡಲಾಯಿತು ಎಂದು ಹೇಳಿದರು.
ಕಾರಣ ತಿಳಿದಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ ನಾನು ಹಾಜರಾತಿಗೆ ಹೋಗುತ್ತಿದ್ದೆ. ಸೆಪ್ಟೆಂಬರ್ 8ರಂದು ನನ್ನನ್ನು ಬಂಧಿಸಲಾಯಿತು. ನನಗೆ ಯಾವುದೇ ಕಾರಣವನ್ನು ಹೇಳಲಾಗಿಲ್ಲ. ಕುಟುಂಬವನ್ನು ಭೇಟಿ ಮಾಡಲು ಕೂಡ ಅವಕಾಶ ನೀಡಲಾಗಿಲ್ಲ. ಅವರು ನನ್ನನ್ನು ನೋಡಲು ಟಿಕೆಟ್‌ಗಳನ್ನು ಹೊಂದಿದ್ದರೂ ಕೂಡ ಬಿಡಲಿಲ್ಲ ಎಂದು ಅವರು ತಿಳಿಸಿದ್ದಾರೆ. ನನ್ನೊಂದಿಗೆ ಬಂಧನಕ್ಕೆ ಒಳಗಾದ ಹಲವಾರು ಮಹಿಳೆಯರು ಇದ್ದರು. ತಣ್ಣನೆಯ ಕೋಣೆಯಲ್ಲಿ ಬಂಧಿಸಿಡಲಾಗಿತ್ತು. ಸರಿಯಾದ ಕಂಬಳಿ ಕೂಡ ನೀಡಲಾಗಿಲ್ಲ. ಕೈಗಳಿಗೆ ಕೋಳ ಹಾಕಿ, ಪಾದಗಳನ್ನು ಕಟ್ಟಲಾಯಿತು. ಸಸ್ಯಾಹಾರಿಯಾಗಿರುವುದರಿಂದ ಅವರು ನನಗೆ ಸರಿಯಾದ ಆಹಾರವನ್ನೂ ಕೂಡ ನೀಡಲಿಲ್ಲ ಎಂದರು.
ಭಾರತಕ್ಕೆ ಹಿಂದಿರುಗುವ ವಿಮಾನದಲ್ಲಿ ಕೈಕೋಳ ಹಾಕದಿದ್ದರೂ ನನಗೆ ಒದಗಿಸಲಾದ ಆಹಾರ ಸೂಕ್ತವಾಗಿರಲಿಲ್ಲ.
