ಉದಯವಾಹಿನಿ, ವಾಷಿಂಗ್ಟನ್: ಅಮೆರಿಕದ ನ್ಯೂಯಾರ್ಕ್‌ನ (New York) ಆಲ್ಬಾನಿಯಲ್ಲಿ (Albany) 53 ವರ್ಷದ ಲೋರೆನ್ಝ್ ಕ್ರಾಸ್, 8 ವರ್ಷಗಳ ಹಿಂದೆ ತನ್ನ 92 ಮತ್ತು 83 ವರ್ಷದ ತಂದೆ-ತಾಯಿಯನ್ನು (Parents) ಕೊಂದು ಮನೆಯ ಹಿತ್ತಲಿನಲ್ಲಿ ಹೂತುಹಾಕಿದ್ದೆ ಎಂದು ಟಿವಿ ಸಂದರ್ಶನದಲ್ಲಿ (TV Interview) ಒಪ್ಪಿಕೊಂಡಿದ್ದಾನೆ. ಸೆಪ್ಟೆಂಬರ್ 26ರಂದು CBS6 ಚಾನಲ್‌ನ ಸಂದರ್ಶನದ ನಂತರ ಸ್ಟುಡಿಯೊ ಬಿಟ್ಟ ತಕ್ಷಣ ಪೊಲೀಸರು ಅವನನ್ನು ಬಂಧಿಸಿದ್ದಾರೆ. ಇವನ ವಿರುದ್ಧ ಎರಡು ಕೊಲೆ ಆರೋಪಗಳು ದಾಖಲಾಗಿವೆ.ಲೋರೆನ್ಝ್ ಕ್ರಾಸ್, CBS6ಗೆ ಇಮೇಲ್ ಕಳುಹಿಸಿ ಸಂದರ್ಶನಕ್ಕೆ ಒಪ್ಪಿದ. “ನನ್ನ ತಂದೆ-ತಾಯಿ ದುರ್ಬಲರಾಗಿದ್ದರು, ಅವರನ್ನು ಕರುಣೆಯಿಂದ ಕೊಂದೆ” ಎಂದು ಹೇಳಿದ. “ತಾಯಿ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದರು, ತಂದೆ ನಡೆದಾಡಲು ಆಗದ ಸ್ಥಿತಿಯಲ್ಲಿದ್ದರು” ಎಂದು ತಿಳಿಸಿದ. ಸಂದರ್ಶಕ ಗ್ರೆಗ್ ಫ್ಲಾಯ್ಡ್, “ನೀವೇ ಕೊಂದಿದ್ದೀರಾ?” ಎಂದು ಕೇಳಿದಾಗ, ಕ್ರಾಸ್, “ಹೌದು, ತುಂಬ ಬೇಗ ಮುಗಿಸಿದೆ” ಎಂದು 8 ನಿಮಿಷದ ಸಂದರ್ಶನದಲ್ಲಿ ಒಪ್ಪಿಕೊಂಡ.
ಸೆಪ್ಟೆಂಬರ್ 26ರಂದು ಕ್ರಾಸ್‌ಗೆ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ರಕ್ಷಣಾ ವಕೀಲ ರೆಬೆಕಾ ಸೊಕೋಲ್, “ಕ್ರಾಸ್ ನಿರ್ದೋಷಿ” ಎಂದು ವಾದಿಸಿದ್ದಾರೆ. “ಮಾಧ್ಯಮವು ಪೊಲೀಸ್‌ರ ಏಜೆಂಟ್ ಆಗಿತ್ತೇ? ಈ ಹೇಳಿಕೆಗಳು ಕಾನೂನಿನಲ್ಲಿ ಸ್ವೀಕಾರಾರ್ಹವೇ?” ಎಂದು ಪ್ರಶ್ನಿಸಿದ್ದಾರೆ.
ಆತನ ತಂದೆ-ತಾಯಿ ಜರ್ಮನಿಗೆ ಹೋಗಿದ್ದಾರೆ ಎಂದು ಭಾವಿಸಿದ್ದೆವು ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ, “ಇದು ಭಯಾನಕ ಕೃತ್ಯ” ಎಂದು ಜನರು ಖಂಡಿಸಿದ್ದಾರೆ. ಸಂದರ್ಶನಕಾರ ಫ್ಲಾಯ್ಡ್, “45 ವರ್ಷದ ವೃತ್ತಿಯಲ್ಲಿ ಇಂತಹ ಸಂದರ್ಶನ ಅಪೂರ್ವ. ಆದರೆ ಕೊಲೆಯಾದವರಿಗೆ ನ್ಯಾಯ ಸಿಕ್ಕಿತೇ?” ಎಂದು ಕೇಳಿದ್ದಾರೆ.
