ಉದಯವಾಹಿನಿ ,ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ (Karur) ನಟ-ರಾಜಕಾರಣಿ ವಿಜಯ್‌ (Vijay) ಅವರ ಟಿವಿಕೆ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 40 ಜನ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ದುರಂತ ನಡೆದ ಒಂದು ದಿನ ನಂತರ, ವಿಜಯ್‌ ಅವರ ನೀಲಂಕರೈ ಮನೆಗೆ ಬಾಂಬ್ ಬೆದರಿಕೆ ಬಂದಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಚೆನ್ನೈ ನಗರ ಪೊಲೀಸ್ ಮತ್ತು CRPF ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬಾಂಬ್ ಸ್ಕ್ವಾಡ್ ಸ್ನಿಫರ್ ಡಾಗ್‌ಗಳೊಂದಿಗೆ ತಪಾಸಣೆ ನಡೆಸಿದೆ.
ಕರೂರಿನ ವೇಲುಸಾಮಿಪುರಂನಲ್ಲಿ ನಡೆದ ರ‍್ಯಾಲಿಯಲ್ಲಿಗೆ ಟಿವಿಕೆಯು 10,000 ಜನರನ್ನು ನಿರೀಕ್ಷಿಸಿತ್ತು, ಆದರೆ 27,000ಕ್ಕೂ ಹೆಚ್ಚು ಜನರು ಸೇರಿದ್ದರು. 1.2 ಲಕ್ಷ ಚದರ ಅಡಿ ಜಾಗದಲ್ಲಿ 500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಟಿವಿಕೆಯ ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಮಧ್ಯಾಹ್ನ 12ಕ್ಕೆ ಬರುತ್ತಾರೆ ಎಂದು ಘೋಷಿಸಿದ್ದರಿಂದ ಬೆಳಿಗ್ಗೆ 11ರಿಂದಲೇ ಜನ ಸೇರಿದ್ದರು. ಆದರೆ ವಿಜಯ್ ನಾಮಕ್ಕಲ್ ರ‍್ಯಾಲಿ ಮುಗಿಸಿ ಸಂಜೆ 7:40ಕ್ಕೆ ಬಂದರು. ಜನರು ಆಹಾರ-ನೀರು ಇಲ್ಲದೆ ಕಾಯುತ್ತಿದ್ದಾಗ ಗುಂಪು ಒತ್ತಡದಿಂದ ಕಾಲ್ತುಳಿತ ಸಂಭವಿಸಿತು.
ರ‍್ಯಾಲಿ ಮುಗಿಸಿ ಚೆನ್ನೈಗೆ ಮರಳಿದ ವಿಜಯ್, ಘಟನೆಯಿಂದ ದುಃಖಿತನಾಗಿದ್ದು ಅಸಹನೀಯ ನೋವು ಅನುಭವಿಸುತ್ತಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲದೆ ಮೃತಪಟ್ಟವರ ಕುಟುಂಬಗಳಿಗೆ ತಲಾ ₹20 ಲಕ್ಷ, ಗಾಯಾಳುಗಳಿಗೆ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ. ಈ ಸರಿಪಡಿಸಲಾಗದ ನಷ್ಟವನ್ನು ಶಮನಗೊಳಿಸಲು ಯಾವುದೇ ಸಾಂತ್ವನದ ಮಾತುಗಳಿಂದ ಸಾಧ್ಯವಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಇತರರು ಸಂತ್ರಸ್ತರಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು.

Leave a Reply

Your email address will not be published. Required fields are marked *

error: Content is protected !!