ಉದಯವಾಹಿನಿ ,ನವದೆಹಲಿ: ತನ್ನ ದ್ವೇಷ ತೀರಿಸುವ ಸಲುವಾಗಿ ತಂದೆಯೊಬ್ಬ ಮಗನನ್ನೇ ಕೊಲೆಯಲ್ಲಿ (Delhi Murder Case) ಭಾಗಿಯಾಗುವಂತೆ ಮಾಡಿರುವ ಘಟನೆ ಶುಕ್ರವಾರ ದೆಹಲಿಯಲ್ಲಿ ನಡೆದಿದೆ. ಬಾಲಾಪರಾಧಿ ಕಾನೂನು ತನ್ನ ಮಗನನ್ನು ರಕ್ಷಿಸುತ್ತದೆ ಎಂದು ಭಾವಿಸಿ ಆತ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಮಗನ 18ನೇ ಹುಟ್ಟುಹಬ್ಬದ ಒಂದು ದಿನ ಮೊದಲು ಅಪ್ರಾಪ್ತ ಮಗನನ್ನು ಕೊಲೆ ಮಾಡಲು ತಂದೆಯೇ ಬಳಸಿಕೊಂಡಿದ್ದು, ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ದೆಹಲಿಯ ಮಾಳವೀಯ ನಗರದ ವಿಜಯ್ ಮಂಡಲ್ ಪಾರ್ಕ್‌ನಲ್ಲಿ ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ವಾಕಿಂಗ್ ಹೋಗುತ್ತಿದ್ದ ಬೇಗಂಪುರ ಮೂಲದ 56 ವರ್ಷದ ಆಸ್ತಿ ವ್ಯಾಪಾರಿ ಲಖ್‌ಪತ್ ಸಿಂಗ್ ಮೇಲೆ ದಾಳಿ ನಡೆಸಲಾಗಿದ್ದು ಅವರು ಸಾವನ್ನಪ್ಪಿದ್ದಾರೆ. ಇದರ ತನಿಖೆ ನಡೆಸಿದ ಪೊಲೀಸರು ಕೊಲೆಯ ಕಾರಣ ತಿಳಿದು ಬೆಚ್ಚಿ ಬಿದ್ದಿದ್ದಾರೆ. ತಂದೆಯೇ ತನ್ನ 17 ವರ್ಷದ ಮಗನನ್ನು ಬಳಸಿಕೊಂಡು ತನ್ನ ದೀರ್ಘಕಾಲದ ಪ್ರತಿಸ್ಪರ್ಧಿಯನ್ನು ಕೊಂದಿದ್ದಾನೆ. ಬಾಲಕನ 18ನೇ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಮೊದಲು ಬಾಲಾಪರಾಧಿ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳಲು ತಂದೆಯೊಬ್ಬ ಈ ಯೋಜನೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಮಂಡಲ್ ಪಾರ್ಕ್‌ನಲ್ಲಿ ಶುಕ್ರವಾರ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಬೇಗಂಪುರ ಮೂಲದ ಲಖ್‌ಪತ್ ಸಿಂಗ್ ಮೇಲೆ ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಬಳಿಕ ದೇಶೀಯ ಪಿಸ್ತೂಲಿನಿಂದ ಗುಂಡಿನ ದಾಳಿ ನಡೆಸಲಾಗಿದೆ. ಕೂಡಲೇ ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತು. ಅಲ್ಲಿಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ಅವರು ತಿಳಿಸಿದ್ದಾರೆ.ತಂದೆ- ಮಗ ಇಬ್ಬರೂ ಸಿಂಗ್ ಅವರ ಚಲನವಲನಗಳನ್ನು ಗಮನಿಸುತ್ತಿದ್ದರು. ಆರೋಪಿಗಳು ಕಪ್ಪು ಬಣ್ಣದ ಬೈಕ್ ನಲ್ಲಿ ಬಂದು ಪಾರ್ಕ್ ಹೊರಗೆ ನಂಬರ್ ಪ್ಲೇಟ್ ತೆಗೆದು ಮುಖ ಮುಚ್ಚಿಕೊಂಡು ಕಾಯುತ್ತಿರುವುದನ್ನು ಸಿಸಿಟಿವಿ ದೃಶ್ಯಗಳಲ್ಲಿ ತೋರಿಸಲಾಗಿದೆ ಎಂದು ಚೌಹಾಣ್ ಹೇಳಿದ್ದಾರೆ.
