ಉದಯವಾಹಿನಿ, ಅಮೆರಿಕ ಮೊದಲು’ ಎನ್ನುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್-1ಬಿ ವೀಸಾಗೆ ಹೊಸ ನಿಯಮ ರೂಪಿಸಿ, ತನ್ನ ದೇಶಕ್ಕೆ ಹೆಚ್ಚಾಗಿ ಬರುತ್ತಿದ್ದ ವಿದೇಶಿ ಪ್ರತಿಭೆಗಳ ನಿರ್ಬಂಧಕ್ಕೆ ಮುಂದಾಗಿದ್ದಾರೆ. ಹೆಚ್-1ಬಿ ವೀಸಾ ಶುಲ್ಕವನ್ನು ಹೆಚ್ಚಿಸಿದ್ದು, ಅಮೆರಿಕದಲ್ಲಿ ಕೆಲಸ ಮಾಡಿ ಹೆಚ್ಚು ಹಣ ಸಂಪಾದಿಸಬೇಕೆಂಬ ವಿದೇಶಿ ಟೆಕ್ಕಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ.
ಟ್ರಂಪ್ ನಿಲುವಿನಿಂದ ಭಾರತ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಹೊಡೆತ ಬಿದ್ದಿದೆ. ಈಗ ಅಮೆರಿಕಗೆ ಟಕ್ಕರ್ ಕೊಡಲು ಚೀನಾ ‘ಕೆ-ವೀಸಾ’ (K Visa) ಜಾರಿಗೆ ಸಿದ್ಧತೆ ನಡೆಸಿದೆ. ಯುಎಸ್ ಬೇಡ, ನಮ್ಮ ದೇಶಕ್ಕೆ ಬನ್ನಿ.. ಒಳ್ಳೆಯ ಉದ್ಯೋಗಾವಕಾಶ ನೀಡುತ್ತೇವೆಂದು ವಿದೇಶಗಳ ಪರಿಣತರಿಗೆ ಆಹ್ವಾನ ನೀಡಲು ಡ್ರ್ಯಾಗನ್ ರಾಷ್ಟ್ರ ಮುಂದಾಗಿದೆ. ಈ ಬೆಳವಣಿಗೆ ಜಾಗತಿಕ ಪ್ರತಿಭಾ ಸ್ಪರ್ಧೆಯಲ್ಲಿ ನಾಟಕೀಯ ತಿರುವು ಪಡೆದುಕೊಂಡಿದೆ. ಏನಿದು ಕೆ ವೀಸಾ? ಇದು ಯಾವಾಗ ಜಾರಿಯಾಗುತ್ತೆ..?
ಯುಎಸ್ ವರ್ಸಸ್ ಚೀನಾ: H-1B ವೀಸಾಗಳಿಗೆ 100,000 ಡಾಲರ್ ಶುಲ್ಕವನ್ನು ಟ್ರಂಪ್ ವಿಧಿಸಿದ್ದಾರೆ. ಅಮೆರಿಕದ ವೀಸಾ ನೀತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೂ, ಚೀನಾ ಪ್ರಪಂಚದಾದ್ಯಂತದ ಅತ್ಯುತ್ತಮ ಪ್ರತಿಭೆಗಳನ್ನು ಸ್ವಾಗತಿಸುತ್ತದೆ ಎಂದು ಹೇಳಿದೆ. ಅದಕ್ಕೆ ಕೆ-ವೀಸಾ ಜಾರಿಗೆ ಕ್ರಮವಹಿಸಿದೆ. ಅದನ್ನು ಹೊರತರುವ ಪ್ರಕ್ರಿಯೆಯಲ್ಲಿದೆ. ಪ್ರವೇಶ-ನಿರ್ಗಮನ ನಿಯಮಗಳಿಗೆ ಹೊಸ ತಿದ್ದುಪಡಿಗಳ ಮೂಲಕ ದೇಶದ 13 ನೇ ಸಾಮಾನ್ಯ ವೀಸಾವಾಗಿ ಕೆ-ವೀಸಾವನ್ನು ಚೀನಾ ಪರಿಚಯಿಸಲಿದೆ. ಕ್ಷೇತ್ರದಲ್ಲಿ ಕನಿಷ್ಠ ಪದವಿ ಹೊಂದಿರುವ, ಸಂಶೋಧನೆ, ಶಿಕ್ಷಣ ಅಥವಾ ತಂತ್ರಜ್ಞಾನ ನಾವೀನ್ಯತೆಯಲ್ಲಿ ತೊಡಗಿಸಿಕೊಂಡಿರುವ ವಿದೇಶಿ ಯುವ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಭೆಗಳಿಗೆ ಈ ವೀಸಾದಡಿ ಅವಕಾಶ ಸಿಗಲಿದೆ.
