ಉದಯವಾಹಿನಿ, ಪ್ರತೀ ವರ್ಷ ಅಶ್ವಿನಿ ಮಾಸದ 9ನೇ ದಿನದಂದು ಅಂದ್ರೆ ಮಹಾನವಮಿಯಂದು ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಜಯದಶಮಿ ದಿನದಂದೂ ಆಯುಧ ಪೂಜೆಯನ್ನು ಮಾಡುತ್ತಾರೆ. 2025ರ ಆಯುಧ ಪೂಜೆಯನ್ನು ಅಕ್ಟೋಬರ್ 01ರ ಬುಧವಾರದಂದು ಆಚರಿಸಲಾಗುವುದು. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ದಿನ ನಾವು ಕೆಲಸ ಮಾಡಲು ಬಳಸುವ ವಸ್ತುಗಳನ್ನು, ಆಯುಧಗಳನ್ನು ಮತ್ತು ರಕ್ಷಾ ಕವಚಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದರ ಹಿಂದೆ ಪುರಾಣ ಪುಣ್ಯಕಥೆಗಳೂ ಇವೆ. ಅವುಗಳೇನೆಂಬುದನ್ನಿಲ್ಲಿ ತಿಳಿಯೋಣ…
ಈ ವರ್ಷ ಶುಭ ಮುಹೂರ್ತ ಎಷ್ಟೊತ್ತಿಗೆ…?
ಈ ವರ್ಷ ಅಕ್ಟೋಬರ್ 1ರಂದು ಆಯುಧಪೂಜಾ ಹಬ್ಬ ಇರಲಿದ್ದು, ಇದಾದ ಮುರು ದಿನ ವಿಜಯದಶಮಿ ಆರಂಭವಾಗುತ್ತದೆ. ಈ ಬಾರಿ ಅಕ್ಟೋಬರ್ 1ರಂದು ಮಧ್ಯಾಹ್ನ 2:09 ರಿಂದ 2:57ರ ಸಂದರ್ಭ ಶುಭಮುಹೂರ್ತ ಇದೆ.ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಅಂದು ದಿನ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ, ಕ್ಷತ್ರಿಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಇವರು ವಿಜಯದಶಮಿಯ ಒಂದು ದಿನ ಮೊದಲು ಆಯುಧ ಪೂಜೆ ದಿನ ತಮ್ಮ ಯುದ್ಧ ಸಾಮಾಗ್ರಿಗಳನ್ನಿಟ್ಟು ಪೂಜೆಯನ್ನು ಮಾಡುತ್ತಿದ್ದರು. ಆಯುಧ ಪೂಜೆಯ ಮೂಲಕ ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯಿಯಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಈ ಪೂಜೆಯನ್ನು ಕೆಲಸ ಮತ್ತು ಜ್ಞಾನದ ಸಮನ್ವಯದ ಸಂಕೇತವೆಂದು ಪರಿಗಣಿಸಲಾಗಿದೆ.
ಆಯುಧ ಪೂಜೆಯ ದಿನದಂದು ಜನರು ತಮ್ಮ ಮನೆ, ಕೆಲಸದ ಸ್ಥಳ, ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಬಳಸುವ ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಪೂಜೆಗೆ ಅಲಂಕರಿಸುತ್ತಾರೆ. ವ್ಯಾಪಾರ ವರ್ಗದವರು ತಮ್ಮ ವ್ಯಾಪಾರ ಸಲಕರಣೆಗಳಾದ ಕಂಪ್ಯೂಟರ್, ಪೆನ್ನು, ಖಾತೆ ಪುಸ್ತಕ ಇತ್ಯಾದಿಗಳಿಗೆ ಪೂಜೆಯನ್ನು ಮಾಡುತ್ತಾರೆ ಮತ್ತು ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಸೈನಿಕರು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ.
