ಉದಯವಾಹಿನಿ, ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆ ಅ.1ರಂದು ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮೋದಿ ಆರ್‌ಎಸ್‌ಎಸ್ ಕೊಡುಗೆಗಳನ್ನು ಎತ್ತಿ ತೋರಿಸುವ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
1925ರ ವಿಜಯದಶಮಿಯಂದು ಆರ್‌ಎಸ್‌ಎಸ್ ಸ್ಥಾಪನೆಗೊಂಡಿದ್ದು, 2025ರ ವಿಜಯದಶಮಿಗೆ 100 ವರ್ಷಗಳನ್ನು ಪೂರೈಸಲಿದೆ. ಇತ್ತೀಚಿಗೆ ನಡೆದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆರ್‌ಎಸ್‌ಎಸ್ ಸಾಧನೆಯನ್ನು ಹಾಡಿಹೊಗಳಿದ್ದರು.
ತಮ್ಮ 126ನೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಆರ್‌ಎಸ್‌ಎಸ್ ಸ್ವಯಂಸೇವಕರ ಪ್ರತಿಯೊಂದು ಕೆಲಸ, ಪ್ರತಿಯೊಂದು ಪ್ರಯತ್ನವೂ ದೇಶ ಮೊದಲು ಎಂಬ ಭಾವನೆಯನ್ನು ಸದಾಕಾಲ ಅತ್ಯುತ್ತಮವಾಗಿರಿಸುತ್ತದೆ. ಈ ಬಾರಿಯ ವಿಜಯದಶಮಿ ಮತ್ತೊಂದು ಕಾರಣದಿಂದ ಬಹಳ ವಿಶೇಷವೆನಿಸುತ್ತದೆ. ಇದೇ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನೆಯ 100ನೇ ವರ್ಷವೂ ಆಗಿದೆ. ಒಂದು ಶತಮಾನದ ಈ ಪ್ರಯಾಣವು ಎಷ್ಟು ಅದ್ಭುತ, ಅಭೂತಪೂರ್ವವಾಗಿದೆ ಮತ್ತು ಅಷ್ಟೇ ಸ್ಫೂರ್ತಿದಾಯಕವಾಗಿದೆ ಎಂದಿದ್ದರು.
