ಉದಯವಾಹಿನಿ, ಬೆಂಗಳೂರು: ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿ YST Tax ಜಾರಿಯಾಗಿದೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಈಗ ಇದು ಸಖತ್ ಸದ್ದು ಮಾಡುತ್ತಿದೆ. ಹಾಗಾದ್ರೇ ವೈ ಎಸ್ ಟಿ ಟ್ಯಾಕ್ಸ್ ಅಂದ್ರೆ ಏನು ಎನ್ನುವ ಬಗ್ಗೆ ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ವಿವರಿಸಿ ಹೇಳಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯರು ಹಾಕಿದ ತೆರಿಗೆಯನ್ನು ಯತೀಂದ್ರರು ವಸೂಲಿ ಮಾಡುತ್ತಿದ್ದಾರೆ. ಮೈಸೂರು, ಹುಬ್ಬಳ್ಳಿ ಮತ್ತಿತರ ಕಡೆ ಹಾಗೂ ರಾಜ್ಯದ ವಿವಿಧೆಡೆ ಇದರ ಕುರಿತು ಮಾತನಾಡುತ್ತಿದ್ದಾರೆ. ಬರೀ ವೈಎಸ್‍ಟಿ ಅಲ್ಲ; ವಿಎಸ್‍ಟಿಯೂ ಇದೆ. ವೇಣುಗೋಪಾಲ್-ಸಿದ್ದರಾಮಯ್ಯ ಟ್ಯಾಕ್ಸ್ ಇದೆ. ವಿಎಸ್‍ಟಿಯನ್ನು ವೇಣುಗೋಪಾಲ್ ಸಂಗ್ರಹಿಸುತ್ತಾರೆ. ಇದು ವಿಎಸ್‍ಟಿ ಸರಕಾರ ಎಂದು ಆರೋಪಿಸಿದರು. ವೈಎಸ್‍ಟಿ, ವಿಎಸ್‍ಟಿ ಬಗ್ಗೆ ಜನರು ಜಾಗೃತರಾಗಬೇಕೆಂದು ಅವರು ಮನವಿ ಮಾಡಿದರು. ಇಲ್ಲಿ ಸಿದ್ದರಾಮಯ್ಯರು ವಿಧಿಸಿದ ತೆರಿಗೆಯನ್ನು ವೇಣುಗೋಪಾಲ್ ಡ್ರಾ ಮಾಡುತ್ತಾರೆ.

ಕಾಂಗ್ರೆಸ್ ಪಾಲಿಗೆ ಕರ್ನಾಟಕ ಸರಕಾರ ಖಜಾನೆ ಇದ್ದಂತೆ ಎಂದು ಟೀಕಿಸಿದರು. ಈ ಗ್ಯಾರಂಟಿ ಎಂದರೆ ಒಂದು ಕೈಯಲ್ಲಿ ತೆಗೆದುಕೊಂಡು ಇನ್ನೊಂದು ಕೈಯಲ್ಲಿ ಕೊಡುವುದು. ಇದು ಮೋಸದ ಯೋಜನೆ ಎಂದು ಅವರು ಆಕ್ಷೇಪಿಸಿದರು. 2022-23ರಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಯಾಕೆ ನಿರುದ್ಯೋಗ ಭತ್ಯೆ ಎಂದು ಪ್ರಶ್ನಿಸಿದ ಅವರು, ನಿರುದ್ಯೋಗಿ ಯುವಕರು ಸಿದ್ದರಾಮಯ್ಯ ಸರಕಾರದ ವಿರುದ್ಧ ದಂಗೆ ಏಳಲಿ ಎಂದು ತಿಳಿಸಿದರು. ಕರೆಂಟ್ ವಿಚಾರದಲ್ಲೂ ಮೋಸ ಮಾಡುತ್ತಿದ್ದಾರೆ. ಭರವಸೆಯಂತೆ 200 ಯೂನಿಟ್ ಉಚಿತ ವಿದ್ಯುತ್ ಕೊಡಿ ಎಂದು ಆಗ್ರಹಿಸಿದರು. ಪ್ರತಿ ಮಹಿಳೆಗೆ 2 ಸಾವಿರ ಎಂದಿದ್ದುದು (ಗೃಹಲಕ್ಷ್ಮಿ) ಮನೆಯೊಡತಿಗೆ ಎಂದು ಬದಲಿಸಿ ಮನೆಮನೆಯಲ್ಲೂ ಜಗಳ ತಂದಿಟ್ಟ ಸರಕಾರ ಇದೆಂದು ಟೀಕಿಸಿದರು.

Leave a Reply

Your email address will not be published. Required fields are marked *

error: Content is protected !!