ಉದಯವಾಹಿನಿ, ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಬೀರೂರು ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿ ಇಂದು (ಅ.3) ಬೆಳಗಿನ ಜಾವ ಹೊರಬಿದ್ದಿದೆ.
ಬೀರೂರಿನ ಮಹಾನವಮಿ ಬಯಲಿನಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಅರ್ಚಕ ದಶರಥ ಪೂಜಾರ್ ಬಿಲ್ಲನ್ನೇರಿ ಕಾರ್ಣಿಕ ನುಡಿದಿದ್ದಾರೆ. `ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಧರ್ಮ – ಅಧರ್ಮ ಸಂಕಷ್ಟವಾಯಿತು. ವಿಶ್ವಕ್ಕೆ ಶಾಂತಿಯ ಭಂಗವಾಯಿತು. ಧರೆಗೆ ವರುಣನ ಆಗಮನವಾಯಿತು. ಸರ್ವರು ಎಚ್ಚರದಿಂದಿರಬೇಕು ಪರಾಕ್ ಎಂದು ಭವಿಷ್ಯ ನುಡಿದಿದ್ದಾರೆ.

ಕಾರ್ಣಿಕದ ಸಂದೇಶ: ಧರ್ಮ ಮತ್ತು ಅಧರ್ಮಗಳ ನಡುವಿನ ಸಂಘರ್ಷವು ಹೆಚ್ಚಾಗಿ ಜಾಗತಿಕ ಶಾಂತಿಗೆ ಭಂಗ ಉಂಟಾಗುವ ಸಾಧ್ಯತೆಯನ್ನು ಸೂಚಿಸುತ್ತದೆ. ಇದರೊಂದಿಗೆ, ಧರೆಗೆ ವರುಣನ ಆಗಮನವಾಯಿತು ಎಂಬ ನುಡಿಯು ಉತ್ತಮ ಮಳೆ ಮತ್ತು ಸುಭಿಕ್ಷತೆಯ ನಿರೀಕ್ಷೆಯನ್ನು ಹುಟ್ಟಿಸಿದೆ. ಇಲ್ಲಿ ನುಡಿಯುವ ಕಾರ್ಣಿಕವು ವರ್ಷದೊಳಗೆ ನೆರವೇರುತ್ತದೆ ಎಂಬ ನಂಬಿಕೆ ಈ ಪ್ರದೇಶದ ಜನರಲ್ಲಿದೆ. ದಶರಥ ಪೂಜಾರರು ದಸರಾದ 9-10 ದಿನಗಳ ಕಾಲ ಅತ್ಯಂತ ಮಡಿಯಿಂದಿದ ಇದ್ದು ಕಾರ್ಣಿಕ ನುಡಿಯುವ ಕೊನೆ ದಿನ ನೀರನ್ನೂ ಕುಡಿಯದೇ ಉಪವಾಸದಿಂದಿದ್ದು ಪೂಜೆ ಬಳಿಕ ಉಪಹಾರ ಸೇವಿಸುತ್ತಾರೆ. ಈ ಪ್ರಸಿದ್ಧ ಮೈಲಾರಲಿಂಗಸ್ವಾಮಿಯ ಕಾರ್ಣಿಕಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.

Leave a Reply

Your email address will not be published. Required fields are marked *

error: Content is protected !!