ಉದಯವಾಹಿನಿ, ಕೊಪ್ಪಳ: ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದು, ಸಚಿವ ಶಿವರಾಜ ತಂಗಡಗಿ ರಾಜೀನಾಮೆಗೆ ಕಾರಣವಾಗಿದ್ದ ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಸುದೀರ್ಘ 10 ವರ್ಷಗಳ ವಿಚಾರಣೆ ನಂತರ ಕೊಪ್ಪಳ ನ್ಯಾಯಾಲಯ ಸೆ.23ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿ, ಅ.3ಕ್ಕೆ ಆದೇಶ ಕಾಯ್ದಿರಿಸಿತ್ತು. ಅದರಂತೆ ನ್ಯಾಯಾಧೀಶ ಸಿ.ಚಂದ್ರಶೇಖರ್ ಅವರು ಪ್ರಕರಣದ 9 ಆರೋಪಿಗಳಾದ ಹನುಮೇಶ ನಾಯಕ, ಮಾಹಾಂತೇಶ ನಾಯಕ, ಮನೋಜ ಪಾಟೀಲ್, ಬಾಳನಗೌಡ, ಕಾಡ್ ಮಂಜ, ನಂದೀಶ, ಪರಶುರಾಮ, ಯಮನೂರಪ್ಪ, ದುರ್ಗಪ್ಪ ಎಲ್ಲರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ. ಜಾಮೀನಿನ ಮೇಲೆ ಹೊರಗಿದ್ದ ಎಲ್ಲಾ ಆರೋಪಿಗಳನ್ನು ನಿರಪರಾಧಿಗಳೆಂದು ಘೋಷಿಸಿ, ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಏನಿದು ಪ್ರಕರಣ..?: ಕನಕಗಿರಿ ತಾಲೂಕಿನ ಕನಕಾಪುರ ಗ್ರಾಮದ ವಿದ್ಯಾರ್ಥಿ ಯಲ್ಲಾಲಿಂಗ ತಮ್ಮೂರಿನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದ. ಈ ಬೆಳವಣಿಗೆ ಬೆನ್ನಲ್ಲೇ 2015ರ ಜನವರಿ 11ರಂದು ಕೊಪ್ಪಳ ರೈಲ್ವೆ ನಿಲ್ದಾಣದಲ್ಲಿ ಯಲ್ಲಾಲಿಂಗನ ಕೊಲೆ ನಡೆದಿತ್ತು. ಸಚಿವ ಶಿವರಾಜ ತಂಗಡಗಿ ಆಪ್ತ ಹನುಮೇಶ ನಾಯಕ ಸೇರಿ 9 ಜನರ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಸಚಿವ ಶಿವರಾಜ ತಂಗಡಗಿ ಸಂಪುಟದಿಂದ ಕೈ ಬಿಡುವಂತೆ ಆಗಿತ್ತು.
