ಉದಯವಾಹಿನಿ, ಭೋಪಾಲ್: ದುರ್ಗಾ ಪೂಜೆಯ ಬಳಿಕ ಮೂರ್ತಿಯನ್ನು ವಿಸರ್ಜಿಸಲು ಭಕ್ತರನ್ನು ಕರೆದೊಯ್ಯುತ್ತಿದ್ದ ಟ್ರ‍್ಯಾಕ್ಟರ್ ಟ್ರಾಲಿ ಉರುಳಿ ಕೊಳಕ್ಕೆ ಬಿದ್ದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಪಂಧಾನ ಪ್ರದೇಶದಲ್ಲಿ ನಡೆದಿದೆ. ಮೃತರಲ್ಲಿ ಹೆಚ್ಚಿನವರು ಯುವತಿಯರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಅರ್ದ್ಲಾ ಮತ್ತು ಜಮ್ಲಿ ಗ್ರಾಮಗಳಿಂದ ಸುಮಾರು 20-25 ಮಂದಿ ದುರ್ಗಾ ಭಕ್ತರು ದುರ್ಗಾ ದೇವಿಯ ಮೂರ್ತಿಯನ್ನು ವಿಸರ್ಜನೆಗಾಗಿ ಕೊಂಡೊಯ್ಯುತ್ತಿದ್ದರು. ಕೊಳದ ಹತ್ತಿರ ನಿಲ್ಲಿಸಿದ್ದ ಟ್ರ‍್ಯಾಕ್ಟರ್ ಸಮತೋಲನ ತಪ್ಪಿ ನೀರಿಗೆ ಬಿದ್ದ ಪರಿಣಾಮ ದುರಂತ ಸಂಭವಿಸಿದೆ.
ಅಪಘಾತದ ನಂತರ ಸ್ಥಳೀಯ ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಹಲವರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾಲಿಯಲ್ಲಿ ಜನಸಂಖ್ಯೆ ಹೆಚ್ಚಾದ ಕಾರಣ ಸಮತೋಲನ ತಪ್ಪಿ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
