ಉದಯವಾಹಿನಿ, ಒಟ್ಟಾವಾ: ಕಾಂತಾರ ಚಾಪ್ಟರ್ 1 ದೆ ಕಾಲ್ ಹಿಮ್ ಒಜಿ ಚಿತ್ರಗಳು ಸೇರಿದಂತೆ ಹಲವಾರು ಭಾರತೀಯ ಚಲನಚಿತ್ರಗಳ ಪ್ರದರ್ಶನವನ್ನು ಕೆನಡಾದಲ್ಲಿ ರದ್ದುಗೊಳಿಸಲಾಗಿದೆ. ಕಳೆದ ವಾರ ಕೆನಡಾದ ಒಂಟಾರಿಯೊ ಪ್ರಾಂತ್ಯದ ಚಲನಚಿತ್ರ ಥಿಯೇಟರ್ ವೊಂದರಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಬೆಂಕಿ ಹಚ್ಚುವ ಮತ್ತು ಗುಂಡಿನ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನಗಳನ್ನು ರದ್ದುಗೊಳಿಸಿರುವುದಾಗಿ ಚಿತ್ರ ಮಂದಿರಗಳು ತಿಳಿಸಿವೆ.
ಓಕ್ವಿಲ್ಲೆಯಲ್ಲಿರುವ ಫಿಲ್ಮ್.ಕಾ ಸಿನಿಮಾಸ್ ನ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿದ್ದು ದಕ್ಷಿಣ ಏಷ್ಯಾದ ಚಲನಚಿತ್ರಗಳ ಥಿಯೇಟರ್ ಪ್ರದರ್ಶನಗಳಿಗೆ ಸಂಬಂಧಿಸಿ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಮತ್ತು ಪವನ್ ಕಲ್ಯಾಣ್ ಅವರ ದೆ ಕಾಲ್ ಹಿಮ್ ಒಜಿ ಪ್ರದರ್ಶನಗಳನ್ನು ಥಿಯೇಟರ್ ನಿಂದ ಹಿಂದಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 25 ರಂದು ಬೆಳಗ್ಗೆ 5.20ರ ಸುಮಾರಿಗೆ ಥಿಯೇಟರ್ ಮೇಲೆ ದಾಳಿಯಾಗಿತ್ತು. ಕೆಂಪು ದ್ರಾವಣವನ್ನು ಕ್ಯಾನ್ ಗಳಲ್ಲಿ ತುಂಬಿಸಿ ತೆಗೆದುಕೊಂಡು ಹೋಗುತ್ತಿದ್ದ ಇಬ್ಬರು ಶಂಕಿತರು ಥಿಯೇಟರ್ ನ ಹೊರಭಾಗದ ಪ್ರವೇಶ ದ್ವಾರಗಳಲ್ಲಿ ಬೆಂಕಿ ಹಚ್ಚಿದ್ದರು. ಥಿಯೇಟರ್ ಹೊರಗೆ ಬೆಂಕಿ ಹಚ್ಚಿದ್ದರಿಂದ ಹೆಚ್ಚಿನ ಹಾನಿಯಾಗಿರಲಿಲ್ಲ ಎಂದು ಹಾಲ್ಟನ್ ಪೊಲೀಸರ ತಿಳಿಸಿದ್ದಾರೆ.

ಈ ಕುರಿತು ವಿಡಿಯೊವನ್ನು ಪೊಲೀಸರು ಹಂಚಿಕೊಂಡಿದ್ದಾರೆ. ಇದರಲ್ಲಿ ಬೂದು ಬಣ್ಣದ ಎಸ್ ಯುವಿ ವಾಹನವು ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಬರುತ್ತಿರುವುದನ್ನು ತೋರಿಸಲಾಗಿದೆ. ಈ ಕಾರು ಥಿಯೇಟರ್ ಪ್ರವೇಶದ್ವಾರದ ಸಮೀಪ ಬಂದು ಎರಡು ಬಾರಿ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಹಿಂದಿರುಗಿದೆ. ಬೆಳಗ್ಗೆ 5.15ರ ಸುಮಾರಿಗೆ ಬಿಳಿ ಎಸ್ ಯುವಿ ಬಂದಿದ್ದು, ಅದರಿಂದ ಇಳಿದ ಇಬ್ಬರು ವ್ಯಕ್ತಿಗಳು ಥಿಯೇಟರ್ ಬಾಗಿಲುನಲ್ಲಿ ಕೆಂಪು ದ್ರವವನ್ನು ಸುರಿದು ಬೆಂಕಿ ಹಚ್ಚಿದ್ದಾರೆ.

Leave a Reply

Your email address will not be published. Required fields are marked *

error: Content is protected !!