ಉದಯವಾಹಿನಿ, ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಬಾರಿ, ಅದರ ಒಂದು ಬೋಗಿಯೊಳಗೆ ಭಾರಿ ಜಗಳ, ಹೊಡೆದಾಟವಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಾಮಾನ್ಯ ಸವಾರಿಯಾಗಬೇಕಿದ್ದದ್ದು ಅನಿರೀಕ್ಷಿತವಾಗಿ ಕುಸ್ತಿ ಅಖಾಡವಾಗಿ ಮೆಟ್ರೋ ಮಾರ್ಪಾಡಾಯಿತು. ಇಬ್ಬರು ಪುರುಷರು ತೀವ್ರ ಹೊಡೆದಾಟದಲ್ಲಿ ತೊಡಗಿದ್ದಾರೆ.
ಕೆಲವು ಸೆಕೆಂಡುಗಳ ಕಾಲ ನಡೆದ ಹೊಡೆದಾಟದ ದೃಶ್ಯವನ್ನು ಸಹ ಪ್ರಯಾಣಿಕನೊಬ್ಬ ರೆಕಾರ್ಡ್ ಮಾಡಿದ್ದು, ಯಾವುದೋ ವಿಷಯದ ಬಗ್ಗೆ ನಡೆದ ವಾಗ್ವಾದದ ಪರಿಣಾಮವಾಗಿ ಜಗಳ ಪ್ರಾರಂಭವಾಗಿದೆ. ಆದರೆ ಕೆಲವೇ ಸೆಕೆಂಡುಗಳಲ್ಲಿ, ಧ್ವನಿಗಳು ಏರಿದವು, ಕೋಪ ಭುಗಿಲೆದ್ದಿತ್ತು. ಮಾತಿನ ಚಕಮಕಿ ಬೆಳೆದು ಕೊನೆಗೆ ಕೈ ಕೈ ಮಿಲಾಯಿಸಲಾಗಿದೆ. ವಿಡಿಯೊದಲ್ಲಿ, ಒಬ್ಬ ವ್ಯಕ್ತಿ ಇನ್ನೊಬ್ಬನನ್ನು ತಳ್ಳುತ್ತಿರುವುದು ಕಂಡುಬಂದಿದೆ. ಆ ವ್ಯಕ್ತಿಗೆ ಹೊಡೆದು ನೆಲಕ್ಕೆ ಬೀಳಿಸಿದ್ದಾನೆ. ಕೆಳಕ್ಕೆ ಬಿದ್ದರೂ ಕೂಡಲೇ ಎದ್ದ ಆ ವ್ಯಕ್ತಿಯು ಕೂದಲು ಹಿಡಿದು ಗುದ್ದಾಡಿದ್ದಾನೆ. ಒಂದೇ ಕೋಚ್‌ನಲ್ಲಿ ಈ ಇಬ್ಬರು ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಈ ನಾಟಕೀಯ ದೃಶ್ಯವನ್ನು ವೀಕ್ಷಿಸುತ್ತಾ ನಿಂತಿದ್ದಾರೆ.
