ಉದಯವಾಹಿನಿ, ಪಾಟ್ನಾ: ಬಿಹಾರದ ಯುವಕರಿಗೆ ಪ್ರಧಾನಿ ಮೋದಿ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ 62 ಸಾವಿರ ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ಕೊಟ್ಟಿದ್ದಾರೆ. ಇದೇ ವೇಳೆ ಬಿಹಾರ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ ಯೋಜನೆಗೂ ಚಾಲನೆ ನೀಡಿದರು. ಇದು 4 ಲಕ್ಷ ರೂ.ಗಳವರೆಗೆ ಸಂಪೂರ್ಣ ಬಡ್ಡಿರಹಿತ ಶಿಕ್ಷಣ ಸಾಲ ಒದಗಿಸುತ್ತದೆ. ಆ ಮೂಲಕ ಉನ್ನತ ಶಿಕ್ಷಣದ ಆರ್ಥಿಕ ಹೊರೆ ಕಡಿಮೆ ಮಾಡಲಿದೆ.
ಹೌದು. ಕೇಂದ್ರ ಸರ್ಕಾರ ಪ್ರಾಯೋಜಕತ್ವದ 62 ಸಾವಿರ ಕೋಟಿ ಹೂಡಿಕೆಯ ‘ಪಿಎಂ-ಸೇತು’ (ಉನ್ನತೀಕರಿಸಿದ ಐಟಿಐಗಳ ಮೂಲಕ ಪ್ರಧಾನ ಮಂತ್ರಿ ಕೌಶಲ ಹಾಗೂ ಉದ್ಯೋಗದ ರೂಪಾಂತರ) ಯೋಜನೆಗೂ ಮೋದಿ ಹಸಿರು ನಿಶಾನೆ ತೋರಿದರು. ಇದೇ ವೇಳೆ ದೇಶದ 34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿರುವ 400 ನವೋದಯ ವಿದ್ಯಾಲಯ ಹಾಗೂ 200 ಏಕಲವ್ಯ ಮಾದರಿ ವಸತಿಶಾಲೆಗಳಲ್ಲಿ ನಿರ್ಮಿಸಲಾದ 1,200 ವೃತ್ತಿಪರ ಕೌಶಲ ಕೇಂದ್ರಗಳನ್ನು ಮೋದಿ ಉದ್ಘಾಟಿಸಿದರು.
ಮುಖ್ಯಮಂತ್ರಿ ನಿಶ್ಚಯ್ ಸ್ವಯಂ ಸಹಾಯತಾ ಭತ್ತಾ’ (ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯತೆ ಭತ್ಯೆ) ಯೋಜನೆಗೆ ಚಾಲನೆ ಬಿಹಾರದ 5 ಲಕ್ಷ ಪದವೀಧರರಿಗೆ ಮಾಸಿಕ 1 ಸಾವಿರ ರೂ. ನೆರವು, ಉಚಿತ ಕೌಶಲ ತರಬೇತಿ ವ್ಯವಸ್ಥೆಗೂ ಅವರು ಚಾಲನೆ ನೀಡಿದರು. ಬಿಹಾರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಅಕಾಡೆಮಿಕ್, ಸಂಶೋಧನಾ ಕೇಂದ್ರಗಳ ಸ್ಥಾಪನೆ ಹಾಗೂ ಪಟ್ನಾದಲ್ಲಿ ಹೊಸದಾಗಿ ನಿರ್ಮಿಸಿದ ಎನ್‌ಐಟಿ ಕ್ಯಾಂಪಸ್ ಅನ್ನು ಅವರು ಲೋಕಾರ್ಪಣೆ ಮಾಡಿದರು. ಇದೇ ವೇಳೆ 4 ಸಾವಿರ ಮಂದಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 450 ಕೋಟಿ ವಿದ್ಯಾರ್ಥಿವೇತನ ವಿತರಣೆ ಮಾಡಿದ್ದಾರೆ.
