ಉದಯವಾಹಿನಿ, ಅಮೆಜಾನ್ ಕಾಡು ಭೂಮಿಯ ಶ್ವಾಸಕೋಶ ಇದ್ದಂತೆ. ಮನುಷ್ಯ ಸೇರಿದಂತೆ ಹಲವು ಜೀವಸಂಕುಲದ ಪ್ರಾಣವಾಯು ಆಮ್ಲಜನಕ. ಭೂಮಿಯ ಒಟ್ಟಾರೆ ಆಮ್ಲಜನಕದಲ್ಲಿ ಶೇ.20 ರಷ್ಟು ಭಾಗ ಈ ಕಾಡಿನಲ್ಲೇ ಸಿಗುತ್ತದೆ. ಕೋಟ್ಯಂತರ ಜೀವಸಂಕುಲವನ್ನು ತನ್ನ ಮಡಿಲಲ್ಲಿಟ್ಟುಕೊಂಡು ಈ ಕಾಡು ಪೊರೆಯುತ್ತಿದೆ. ಮನುಷ್ಯನಿಗೆ ಶ್ವಾಸಕೋಶ ಎಷ್ಟು ಮುಖ್ಯವೋ, ಈ ಭೂಮಿಯಲ್ಲಿರುವ ಜೀವರಾಶಿಯ ಉಸಿರಿಗೆ ಅಮೆಜಾನ್ ಮಳೆಕಾಡು ಅಷ್ಟೇ ಮುಖ್ಯ. ಅಂತಹ ಕಾಡು ಈಗ ತನ್ನ ಮರಗಳ ವಿಚಾರವಾಗಿ ಸುದ್ದಿಯಲ್ಲಿದೆ.
ಅಮೆಜಾನ್ ಮಳೆಕಾಡು: ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಬೇರೆ ಯಾವ ಭಾಗದಲ್ಲೂ ಇಲ್ಲ. ಅಲ್ಲಿನ ವಾತಾವರಣವೇ ಇದಕ್ಕೆ ಮುಖ್ಯ ಕಾರಣ. ಸುಮಾರು 5.5 ಮಿಲಿಯನ್ ಸ್ಕ್ವೇರ್ ಕಿ.ಮೀ.ನಷ್ಟು ಅಂದರೆ, ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಅರಣ್ಯ ಪ್ರದೇಶವನ್ನು ಇದು ಹೊಂದಿದೆ. ಹೆಚ್ಚಿನ ಮಳೆ, ಸದಾ ತುಂಬಿ ಹರಿಯುವ ನದಿಯಿಂದಾಗಿ ಅರಣ್ಯ ಸುತ್ತಲೂ ದಟ್ಟವಾದ ಮರಗಳು ಬೆಳೆದು ನಿಂತಿವೆ. ಇಲ್ಲಿ ನೂರಾರು ಮತ್ತು ಸಾವಿರಾರು ಜಾತಿಯ ಗಡಿ-ಮರಗಳು, ಪ್ರಾಣಿ-ಪಕ್ಷಗಳು, ಜಲಚರಗಳನ್ನು ಕಾಣಬಹುದು. ಜೀವಕೋಟಿಗೆ ಇದು ಅಪೂರ್ವ ಸಂಪತ್ತು. 427 ಸಸ್ತನಿಗಳು, 1,300 ಪಕ್ಷಿಗಳು, 378 ಸರೀಸೃಪಗಳು, 400 ಕ್ಕೂ ಹೆಚ್ಚು ಉಭಯಚರಗಳು ಮತ್ತು 2,500 ರಿಂದ 3,000 ಕ್ಕೂ ಹೆಚ್ಚು ಸಿಹಿನೀರಿನ ಮೀನುಗಳು ಅಸ್ತಿತ್ವದಲ್ಲಿವೆ. ಅಮೆಜಾನ್ ಮಳೆಕಾಡು ವಿಶ್ವದ ಅತಿದೊಡ್ಡ ಉಷ್ಣವಲಯದ ಮಳೆಕಾಡಾಗಿದ್ದು, ದಕ್ಷಿಣ ಅಮೆರಿಕಾದ ಒಂಬತ್ತು ದೇಶಗಳನ್ನು ವ್ಯಾಪಿಸಿದೆ. ಬ್ರೆಜಿಲ್, ಪೆರು, ಕೊಲಂಬಿಯಾ, ಬೊಲಿವಿಯಾ, ಈಕ್ವೆಡಾರ್, ಫ್ರೆಂಚ್ ಗಯಾನಾ, ಗಯಾನಾ, ಸುರಿನಾಮ್ ಮತ್ತು ವೆನೆಜುವೆಲಾದಲ್ಲಿ ಕಾಡು ವ್ಯಾಪಿಸಿದೆ. ಆದಾಗ್ಯೂ, ಸುಮಾರು 60% ಮಳೆಕಾಡು ಬ್ರೆಜಿಲ್‌ನಲ್ಲಿದೆ.
ಕಾಡಿನ ಪ್ರಯೋಜನ ಏನು..?: ಹವಾಮಾನ ನಿಯಂತ್ರಣದಲ್ಲಿ ಅಮೆಜಾನ್ ಕಾಡು ಪ್ರಮುಖ ಪಾತ್ರ ವಹಿಸುತ್ತದೆ. ಕೋಟ್ಯಂತರ ಟನ್ ಇಂಗಾಲವನ್ನು ಹೀರಿಕೊಂಡು ವಾತಾವರಣಕ್ಕೆ ಬಿಡುಗಡೆಯಾಗುವುದನ್ನು ತಡೆಯುತ್ತದೆ. ಅಮೆಜಾನ್ ಭೂಮಿಯ ಮೇಲೆ ಕಂಡುಬರುವ ಶೇ.10 ಕ್ಕಿಂತ ಹೆಚ್ಚು ಜೀವವೈವಿಧ್ಯವನ್ನು ಹೊಂದಿದೆ. ಭೂಮಿಯ ಉಷ್ಣವಲಯದ ಕಾಡುಗಳಲ್ಲಿ ಸಂಗ್ರಹವಾಗುವ ಇಂಗಾಲದ 3ನೇ ಒಂದು ಭಾಗಕ್ಕಿಂತ ಹೆಚ್ಚು ಅಮೆಜಾನ್ ಕಾಡಿನಲ್ಲಿದೆ. ಇಂಗಾಲದ ಡೈಆಕ್ಸೈಡ್ ಹೀರಿಕೊಂಡು ಹವಾಮಾನ ಬದಲಾವಣೆ ತಡೆಯುತ್ತದೆ. ಜೀವವೈವಿಧ್ಯತೆ ಕಾಪಾಡುತ್ತದೆ. ಭೂಮಿ ಮೇಲೆ ಮಳೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದು ವಿಶ್ವದಾದ್ಯಂತ ನೀರಿನ ಚಕ್ರಕ್ಕೆ ಕೊಡುಗೆ ನೀಡುತ್ತದೆ. ವಿಶ್ವಕ್ಕೆ ಔಷಧೀಯ ಪ್ರಯೋಜನ ಇದರಿಂದ ಸಿಗುತ್ತಿದೆ.
