ಉದಯವಾಹಿನಿ, ಅಕೈವ್: ಉಕ್ರೇನ್‌ನ ಸುಮಿಯಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಕೈವ್‌ಗೆ ಹೋಗುವ ರೈಲನ್ನು ಗುರಿಯಾಗಿಸಿಕೊಂಡು ರಷ್ಯಾ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಿಂದ 30 ಜನ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ರಷ್ಯಾ ದಾಳಿಯ ವೀಡಿಯೋವನ್ನು ಝೆಲೆನ್ಸ್ಕಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಹಾನಿಗೊಳಗಾದ ರೈಲಿನಲ್ಲಿ ಬೆಂಕಿಯ ಜ್ಯಾಲೆಗಳು ಬರುತ್ತಿರುವುದು ಸೆರೆಯಾಗಿದೆ. ಘಟನಾ ಸ್ಥಳದಲ್ಲಿ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಾಳುಗಳ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೆ, ಕನಿಷ್ಠ 30 ಮಂದಿ ಸಾವಿಗೀಡಾಗಿದ್ದಾರೆ.
ರಷ್ಯಾದೊಂದಿಗಿನ ಶಾಂತಿ ಮಾತುಕತೆ ವಿಫಲದಿಂದ ಹತಾಶೆಗೊಳಗಾಗಿರುವ ಝೆಲೆನ್ಸ್ಕಿ, ರಷ್ಯಾ ವಿರುದ್ಧ ಬಲವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ರಷ್ಯನ್ನರಿಗೆ ತಾವು ನಾಗರಿಕರನ್ನು ಕೊಲ್ಲುತ್ತಿದ್ದೇವೆ ಎಂದು ತಿಳಿದಿರಲು ಸಾಧ್ಯವಿಲ್ಲ. ಪ್ರತಿದಿನ ರಷ್ಯಾ ಮುಗ್ದ ಜನರ ಜೀವಗಳನ್ನು ತೆಗೆದುಕೊಳ್ಳುತ್ತಿದೆ. ಇದನ್ನು ಜಗತ್ತು ನಿರ್ಲಕ್ಷಿಸಬಾರದು, ಇದೊಂದು ಭಯೋತ್ಪಾದನಾ ಕೃತ್ಯ ಎಂದು ಕರೆದಿದ್ದಾರೆ. ಗವರ್ನರ್ ಹ್ರೈಹೊರೊವ್ ಎಕ್ಸ್‌ನಲ್ಲಿ ಉರಿಯುತ್ತಿರುವ ರೈಲು ಬೋಗಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಘಟನಾ ಸ್ಥಳದಲ್ಲಿ ವೈದ್ಯರು ಮತ್ತು ರಕ್ಷಣಾ ಅಧಿಕಾರಿಗಳು ಇದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ರಷ್ಯಾ ದಾಳಿಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಉಕ್ರೇನ್‌ನೊಂದಿಗೆ ಯುರೋಪಿಯನ್ ಕಮಿಷನ್ ನಿಂತಿದೆ. ರಷ್ಯಾ ಅಂತಿಮವಾಗಿ ಶಾಶ್ವತ ಶಾಂತಿಯನ್ನು ಒಪ್ಪುವವರೆಗೂ ಅದರ ಮೇಲೆ ಒತ್ತಡವನ್ನು ಹೆಚ್ಚಿಸುವುದನ್ನು ಮುಂದುವರಿಸಬೇಕು ಎಂದು ಬರೆದುಕೊಂಡಿದ್ದಾರೆ
