ಉದಯವಾಹಿನಿ, ಕೊಪ್ಪಳ: ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ನಡೆಯುವುದಿಲ್ಲ. ಅದೆಲ್ಲವೂ ಭ್ರಾಂತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸಿಎಂ ಸಿದ್ದರಾಮಯ್ಯ ಅವರಿಂದು ಕೊಪ್ಪಳ ಜಿಲ್ಲೆಯಲ್ಲಿ 2005 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು. ಕಿಮ್ಸ್ ಬೋಧಕ ಆಸ್ಪತ್ರೆ, ಆಸ್ಪತ್ರೆ ಆವರಣದಲ್ಲಿ ನಂದಿನಿ ಪಾರ್ಲರ್, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆ, ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು. ಬಳಿಕ ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶ ಉದ್ಘಾಟಿಸಿದರು.
ಕೊಪ್ಪಳ ತಾಲೂಕಿನ ಬಸಾಪುರ ಲಘು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಸೇರಿದಂತೆ ಯಾವ ಕ್ರಾಂತಿಯೂ ನಡೆಯುವುದಿಲ್ಲ. ಅದೆಲ್ಲವೂ ಬರೀ ಭ್ರಾಂತಿ ಅಷ್ಟೇ. ಸಮಾಜ ನಿರ್ಮಾಣ, ಸರ್ವರ ಅಭಿವೃದ್ಧಿಗೆ ಸಮೀಕ್ಷೆ ಮಾಡುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ. ಸಮೀಕ್ಷೆ ವಿರೋಧಿಸುವವರು ಸಮಾಜದ ವಿರೋಧಿಗಳಿಗೆ ಸಮ. ಯೋಜನೆ ರೂಪಿಸಲು ಅಂಕಿ ಅಂಶಗಳು ಬೇಕು. ಸಮೀಕ್ಷೆ ಬೇಡ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೇಂದ್ರ ನಡೆಸುವ ಜಾತಿಗಣತಿ ವಿರೋಧಿಸುತ್ತಾರಾ..? ಬದಲಾವಣೆ ಬೇಡದವರು ಬೇಡ ಎನ್ನುತ್ತಾರೆಂದು ಸಮರ್ಥಿಸಿಕೊಂಡರು.
ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ನನ್ನ ನಿಲುವು ಏನು ಇಲ್ಲ. ಕೆಲ ಸ್ವಾಮೀಜಿಗಳು ಈ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ನಮ್ಮದೇನಿಲ್ಲ ಎಂದರು. ಈ ವೇಳೆ ಕಿವಿಯಲ್ಲಿ ಮಾಹಿತಿ ನೀಡಲು ಬಂದ ಸಚಿವ ತಂಗಡಗಿಗೆ ಸಿದ್ದು ಗದರಿದರು.
