ಉದಯವಾಹಿನಿ, ನ್ಯೂಯಾರ್ಕ್: ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಅವರ ಮನೆಗೆ ನುಗ್ಗಿ ಅವರ ತಲೆಗೆ ಗುಂಡು ಹಾರಿಸಿದ್ದು ಅಮೆರಿಕದ ನೌಕಾಪಡೆಯ ಸೀಲ್‌ಗಳು ಎಂಬುದನ್ನು ಇತಿಹಾಸ ಎಂದಿಗೂ ಮರೆಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಸೆಪ್ಟಂಬರ್ 2001ರಲ್ಲಿ ಅಲ್ ಖೈದಾ ಭಯೋತ್ಪಾದಕರು ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಗೋಪುರಗಳ ಮೇಲೆ ದಾಳಿ ಮಾಡುವ ಒಂದು ವರ್ಷದ ಮೊದಲು, ಬಿನ್ ಲಾಡೆನ್ ಬಗ್ಗೆ ಎಚ್ಚರಿಕೆ ನೀಡಿದ್ದಾಗಿ ಟ್ರಂಪ್ ತಿಳಿಸಿದ್ದಾರೆ. ವರ್ಜೀನಿಯಾದ ನಾರ್ಫೋಕ್‌ನಲ್ಲಿ ಅಮೆರಿಕ ನೌಕಾಪಡೆಯ 250ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೀಲ್ನ ಕಾರ್ಯಾಚರಣೆಯನ್ನು ಶ್ಲಾಘಿಸಿದರು.
9/11 ದಾಳಿಗೆ ಒಂದು ವರ್ಷ ಮೊದಲು ಅಧಿಕಾರಿಗಳಿಗೆ ಬಿನ್ ಲಾಡೆನ್ ಮೇಲೆ ಗಮನವಿಡುವಂತೆ ಕೇಳಿಕೊಂಡಿದ್ದೆ. ವಿಶ್ವ ವಾಣಿಜ್ಯ ಕೇಂದ್ರವನ್ನು ಸ್ಫೋಟಿಸುವ ಒಂದು ವರ್ಷದ ಮೊದಲು ನಾನು ಒಸಾಮಾ ಬಿನ್ ಲಾಡೆನ್ ಬಗ್ಗೆ ಪುಸ್ತಕದಲ್ಲಿ ಬರೆದಿದ್ದೆ. ಒಂದು ವರ್ಷದ ಬಳಿಕ ಯಾರೋ ಒಸಾಮಾ ಬಿನ್ ಲಾಡೆನ್ ಹೆಸರು ಹೇಳಿದಾಗ ನನಗೆ ಇಷ್ಟವಾಗಲಿಲ್ಲ. ಅವರನ್ನು ಎಚ್ಚರದಿಂದ ಇರಲು ತಿಳಿಸಿದೆ. ಅವರು ಅದನ್ನು ಮಾಡಲಾಗಿಲ್ಲ. ಆದಾದ ಒಂದು ವರ್ಷದ ಬಳಿಕ ಲಾಡೆನ್ ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ಮಾಡಿದ. ಬಿನ್ ಲಾಡೆನ್ ಕುರಿತು ಮೊದಲೇ ಸುಳಿವು ನೀಡಿದ ಕ್ರೆಡಿಟ್ ಅನ್ನು ಯಾರು ನನಗೆ ನೀಡಲಿಲ್ಲ. ನಿಮಗೆ ಹಳೆ ಕಥೆ ಗೊತ್ತಿದೆ. ಅವರು ನಿಮಗೆ ಪ್ರಶಂಸೆ ನೀಡದಿದ್ದರೆ, ನೀವೇ ಅದನ್ನು ತೆಗೆದುಕೊಳ್ಳಬೇಕು. ಅಮೆರಿಕ ನೌಕಾ ಸೇನೆ ಲಾಡೆನ್ ಅನ್ನು ಹೊಡೆದು ಕೊಂದಿತು ಎಂದು ಹೇಳಿದ್ದಾರೆ.
2011ರ ಮೇ ಅಲ್ಲಿ ಅಮೆರಿಕದ ನಾಕಾ ಸೇನೆ ಸೀಲ್ಸ್ ಪಾಕಿಸ್ತಾನದ ಅಬೋಟಾಬಾದ್‌ನ ಮನೆಯೊಂದರಲ್ಲಿ ಅಡಗಿಕೊಂಡಿದ್ದ ಬಿನ್ ಲಾಡೆನ್‌ನ್ನು ಕೊಂದಿತು. ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಅನುಮತಿಯ ನಂತರ ಈ ದಾಳಿ ನಡೆಸಲಾಗಿತ್ತು.
ಅಲ್ ಖೈದಾದ ನಾಯಕ ಮತ್ತು ಸಾವಿರಾರು ಮುಗ್ಧ ಪುರುಷರು, ಮಹಿಳೆಯರು ಮತ್ತು ಮಕ್ಕಳ ಹತ್ಯೆಗೆ ಕಾರಣನಾದ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಕೊಂದ ಕಾರ್ಯಾಚರಣೆಯನ್ನು ಅಮೆರಿಕ ನಡೆಸಿದೆ ಎಂದು ಅಮೆರಿಕ ಮತ್ತು ಜಗತ್ತಿಗೆ ತಿಳಿಸಬಲ್ಲೆ ಎಂದಿರುವ ಟ್ರಂಪ್ ಅಫ್ಘಾನಿಸ್ತಾನದಿಂದ ಅಮೆರಿಕ ಹೊರ ನಡೆದಿದ್ದಕ್ಕೆ ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡನ್ ನಾಯಕತ್ವವನ್ನು ಟೀಕಿಸಿದರು. ಅಫ್ಘಾನಿಸ್ತಾನವನ್ನು ನಾವು ಸುಲಭವಾಗಿ ಗೆಲ್ಲುತ್ತಿದ್ದೆವು. ಪ್ರತಿಯೊಂದು ಯುದ್ಧವನ್ನೂ ಅಮೆರಿಕ ಸುಲಭವಾಗಿ ಗೆಲ್ಲುತ್ತಿತ್ತು. ಆದರೆ, ನಾವು ರಾಜಕೀಯವಾಗಿ ಸರಿಯಾಗಿದ್ದೆವು. ಆದರೆ, ಮುಂದೆ ನಾವು ರಾಜಕೀಯವಾಗಿ ಸರಿಯಾಗಿರುವುದಿಲ್ಲ. ಅದನ್ನು ಅರ್ಥಮಾಡಿಕೊಳ್ಳಿ. ನಾವು ಗೆಲ್ಲುತ್ತೇವೆ ಎಂದಿದ್ದಾರೆ.
