ಉದಯವಾಹಿನಿ, ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಪುನೀತ್ ರುದ್ರನಾಗ್ ಚೊಚ್ಚಲ ನಿರ್ದೇಶನದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕರಾಗಿ ಅಭಿನಯಿಸುತ್ತಿರುವ `ಉಗ್ರಾಯುಧಮ್’ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಶ್ರೀಮುರಳಿ ಅವರ ತಂದೆ, ಹಿರಿಯ ನಿರ್ಮಾಪಕ ಎಸ್‌ಎ.ಚಿನ್ನೇಗೌಡ ಅವರು ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಎಸ್‌ಎ.ಚಿನ್ನೇಗೌಡ ಹಾಗೂ ಪಿ.ಆರ್.ಓ ಸುಧೀಂದ್ರ ವೆಂಕಟೇಶ್ ಜೊತೆಗೂಡಿ ಶೀರ್ಷಿಕೆ ಅನಾವರಣ ಮಾಡಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಮಾತನಾಡಿ, ಇಂತಹ ಪಿರಿಯಾಡಿಕ್ ಡ್ರಾಮ ಕಥಾಹಂದರ ಹೊಂದಿರುವ ಚಿತ್ರವನ್ನು ನಮ್ಮ ಸಂಸ್ಥೆಯ ಮೂಲಕ ನಿರ್ಮಿಸುತ್ತಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಈಗ ಸಾಕಷ್ಟು ಕನ್ನಡದ ಚಿತ್ರಗಳು ವಿಶ್ವಮಟ್ಟದಲ್ಲಿ ಹೆಸರು ಮಾಡುತ್ತಿದೆ. ಆ ಸಾಲಿಗೆ ನಮ್ಮ ಚಿತ್ರ ಕೂಡ ಸೇರುವ ಭರವಸೆ ಇದೆ. ನಮ್ಮ ಚಿತ್ರದ ನಾಯಕರಾದ ಶ್ರೀಮುರಳಿ ಹಾಗೂ ನಿರ್ದೇಶಕ ಪುನೀತ್ ರುದ್ರನಾಗ್ ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ ಎಂದರು.
