ಉದಯವಾಹಿನಿ, ಚಂಡೀಗಢ: ಹರಿಯಾಣದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ ಚಂಡೀಗಢದ ಸೆಕ್ಟರ್ 11ರಲ್ಲಿ ಈ ಘಟನೆ ನಡೆದಿದೆ. ಮೃತ ಅಧಿಕಾರಿಯನ್ನು ಹರಿಯಾಣದ ಎಡಿಜಿಪಿ ವೈ. ಪೂರನ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ತಮ್ಮ ಸೇವಾ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅವರ ಸೌಂಡ್‌ಪ್ರೂಫ್ ರೂಮ್‌ನಲ್ಲಿ ಘಟನೆ ನಡೆದಿದೆ. ಹೀಗಾಗಿ ಘಟನೆ ತಕ್ಷಣ ಗಮನಕ್ಕೆ ಬರಲಿಲ್ಲ ಎನ್ನಲಾಗಿದ. ಸದ್ಯ ವಿಧಿ ವಿಜ್ಞಾನ ತಂಡದ ಸದಸ್ಯರು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಚಂಡೀಗಢದ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್ ಘಟನೆ ಬಗ್ಗೆ ಮಾಹಿತಿ ನೀಡಿ, ʼʼಸೆಕ್ಟರ್ 11ರ ಪೊಲೀಸ್ ಠಾಣೆಗೆ ಮಂಗಳವಾರ ಮಧ್ಯಾಹ್ನ1.30ರ ವೇಳೆಗೆ ಕರೆಬಂದಿದ್ದು, ಪೂರನ್ ಕುಮಾರ್ ಆತ್ಮಹತ್ಯೆಯ ಬಗ್ಗೆ ಮಾಹಿತಿ ನೀಡಲಾಗಿತ್ತುʼʼ ಎಂದಿದ್ದಾರೆ.
ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಸಿಎಫ್‌ಎಸ್‌ಎಲ್ ತಂಡ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ. ಪೋಸ್ಟ್ ಮಾರ್ಟಮ್ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಹೊರ ಬೀಳಲಿದೆʼʼ ಎಂದು ಕನ್ವರ್‌ದೀಪ್ ಕೌರ್ ವಿವರಿಸಿದ್ದಾರೆ. ಪ್ರಸ್ತುತ ಪೂರನ್ ಕುಮಾರ್ ಅವರ ಪತ್ನಿ, ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ನಿಯೋಗದ ಜತೆ ಜಪಾನ್‌ನಲ್ಲಿದ್ದು, ನಾಳೆ (ಅಕ್ಟೋಬರ್ 8) ಭಾರತಕ್ಕೆ ಹಿಂದಿರುಗಲಿದ್ದಾರೆ. 2001 ಬ್ಯಾಚ್‌ನ ಐಪಿಎಸ್ ಅಧಿಕಾರಿ ಪೂರನ್ ಕುಮಾರ್ ಅವರನ್ನು ಈ ಹಿಂದೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ (ಎಡಿಜಿಪಿ, ರೋಕ್ಟಕ್ ಶ್ರೇಣಿ) ನೇಮಿಸಲಾಗಿತ್ತು. ಇದಾದ ಬಳಿಕ ರೋಕ್ಟಕ್‌ನ ಸುನಾರಿಯಾದಲ್ಲಿರುವ ಪೊಲೀಸ್ ತರಬೇತಿ ಕೇಂದ್ರದ ಇನ್ಸ್‌ಪೆಕ್ಟರ್ ಜನರಲ್ ಆಗಿ ವರ್ಗಾಯಿಸಲಾಯಿತು.
