ಉದಯವಾಹಿನಿ, ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಚಿನ್ನ ಕಳುವು ಪ್ರಕರಣ ಗಂಭೀರತೆಯನ್ನು ಪಡೆದುಕೊಂಡಿದ್ದು, ಪ್ರಕರಣದ ಬಗ್ಗೆ ಕೇರಳ ಹೈಕೋರ್ಟ್ ಸ್ವಯಂಪ್ರೇರಿತ ತನಿಖೆ ಆರಂಭಿಸಿದೆ. ದೇಗುಲದ ದ್ವಾರಪಾಲಕರ ವಿಗ್ರಹಗಳ ಮೂಲ ಚಿನ್ನದ ಲೇಪವನ್ನು ಮಾರಾಟ ಮಾಡಿ, ಆ ಹಣವನ್ನು ದುರುಪಯೋಗಪಡಿಸಿಕೊಂಡಿರಬಹುದು ಎಂದು ನ್ಯಾಯಾಲಯ ಶಂಕಿಸಿದೆ. 2019 ರಲ್ಲಿ, ಉನ್ನಿಕೃಷ್ಣನ್ ಪೊಟ್ಟಿ ಎಂಬುವರು ಚಿನ್ನದ ಲೇಪ ಹೊಂದಿದ್ದ ದ್ವಾರಪಾಲಕರ ವಿಗ್ರಹಗಳಿಗೆ ಮತ್ತೊಂದು ಚಿನ್ನದ ಲೇಪ ಹಾಕಿಸಿದ್ದರು. ಆ ಸಮಯದಲ್ಲಿ, ಲೇಪದ ನಂತರ ಉಳಿದಿದ್ದ ಹೆಚ್ಚುವರಿ ಚಿನ್ನವನ್ನು ಮದುವೆ ಖರ್ಚಿಗೆ ಬಳಸಿಕೊಳ್ಳುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಕಳೆದ ತಿಂಗಳು, ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳನ್ನು ನ್ಯಾಯಾಲಯದ ಅನುಮತಿ ಇಲ್ಲದೆ, ಕೇವಲ ಆರು ವರ್ಷಗಳ ಹಿಂದೆಯೇ ಚಿನ್ನದ ಲೇಪ ಮಾಡಿಸಿದ್ದರೂ, ಮತ್ತೆ ಚಿನ್ನದ ಲೇಪಕ್ಕಾಗಿ ಚೆನ್ನೈಗೆ ತೆಗೆದುಕೊಂಡು ಹೋಗಲಾಗಿತ್ತು ಎಂಬ ವರದಿ ಆಧರಿಸಿ ಹೈಕೋರ್ಟ್ ಸ್ವಯಂಪ್ರೇರಿತ ತನಿಖೆ ಆರಂಭಿಸಿತ್ತು. ಇದರ ಬೆನ್ನಲ್ಲೇ, ದೇಗುಲದ ಎಲ್ಲಾ ಅಮೂಲ್ಯ ವಸ್ತುಗಳ ಪಟ್ಟಿಯನ್ನು ತಯಾರಿಸಲು ಮಾಜಿ ನ್ಯಾಯಾಧೀಶ ಕೆ.ಟಿ. ಶಂಕರನ್ ಅವರನ್ನು ನೇಮಿಸಿತ್ತು.

ವಿಚಕ್ಷಣಾಧಿಕಾರಿಯ ಹಿಂದಿನ ವರದಿಯು, ದ್ವಾರಪಾಲಕ ವಿಗ್ರಹಗಳ ಚಿನ್ನದ ಲೇಪವನ್ನು ನ್ಯಾಯಾಲಯಕ್ಕೆ ತಿಳಿಸದೆ ತೆಗೆದುಹಾಕಲಾಗಿತ್ತು ಮತ್ತು 2019 ರಲ್ಲಿ ಚಿನ್ನದ ಲೇಪದ ನಂತರ ವಿಗ್ರಹಗಳು ಸುಮಾರು 4 ಕೆಜಿ ತೂಕ ಕಡಿಮೆಯಾಗಿದ್ದವು ಎಂದು ತಿಳಿಸಿತ್ತು. 2019 ರ ಚಿನ್ನದ ಲೇಪವನ್ನು ಉನ್ನಿಕೃಷ್ಣನ್ ಪೊಟ್ಟಿ ಅವರು ಪ್ರಾಯೋಜಿಸಿದ್ದರು. ವಿಗ್ರಹಗಳನ್ನು ಚೆನ್ನೈನ ಸ್ಮಾರ್ಟ್ ಕ್ರಿಯೇಷನ್ಸ್ ಎಂಬ ಸಂಸ್ಥೆಗೆ ಚಿನ್ನದ ಲೇಪಕ್ಕಾಗಿ ತೆಗೆದುಕೊಂಡು ಹೋಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!