ಉದಯವಾಹಿನಿ, ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಭೀಕರ ಮಳೆಯಿಂದ ಉಂಟಾದ ಭೂಕುಸಿತಕ್ಕೆ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ. ಇದೆ ವೇಳೆ, ಭೂಕುಸಿತಕ್ಕೆ ಸಿಕ್ಕಿಂ ಹಾಗೂ ಭೂತಾನ್ ದೇಶದಲ್ಲಿ ಹೆಚ್ಚು ಮಳೆಯಾಗಿದ್ದೆ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮತ್ತೊಂದೆಡೆ ಮಮತಾ ಬ್ಯಾನರ್ಜಿ ಅವರಿಗೆ ಭೂತಾನ್ ಎಚ್ಚರಿಕೆಯ ಸಂದೇಶವನ್ನ ರವಾನಿಸಿದೆ ಎನ್ನಲಾಗುತ್ತಿದೆ.
ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ವಿಪತ್ತಿನಿಂದ ಹೆಚ್ಚು ತೀವ್ರವಾಗಿ ಬಳಲಿದ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಇದಕ್ಕೂ ಮುನ್ನ ಅವರು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಪರಿಸ್ಥಿತಿಯನ್ನು ಸಮೀಕ್ಷಿಸಿದರು. ಇದಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶನಿವಾರ ರಾತ್ರಿ, ಕೇವಲ 12 ಗಂಟೆಗಳಲ್ಲಿ ಉತ್ತರ ಬಂಗಾಳದಲ್ಲಿ 300 ಮಿಲಿಮೀಟರ್‌ಗಿಂತ ಹೆಚ್ಚಿನ ಭಾರೀ ಮಳೆಯಾಗಿದ್ದು, ಸಂಕೋಶ್ ನದಿಯು ಉಕ್ಕಿ ಹರಿಯಲು ಕಾರಣವಾಯಿತು.
ಜೊತೆಗೆ, ಭೂತಾನ್ ಮತ್ತು ಸಿಕ್ಕಿಂನಲ್ಲಿರುವ ಜಲಮಟ್ಟದ ತೀವ್ರ ಏರಿಕೆಯಿಂದ ಸ್ಥಿತಿ ಮತ್ತಷ್ಟು ಭೀಕರಗೊಂಡಿತು. ಈ ಅನಾಹುತದ ಪರಿಣಾಮವಾಗಿ ನಾವು ನಮ್ಮ ಕೆಲ ಸಹೋದರರು ಮತ್ತು ಸಹೋದರಿಯರನ್ನು ಕಳೆದುಕೊಂಡಿದ್ದೇವೆ ಎಂಬ ಸುದ್ದಿ ಬಹಳ ಆತಂಕ ಮತ್ತು ದುಃಖವನ್ನುಂಟುಮಾಡಿದೆ.” ಎಂದರು. ಇದೆ ವೇಳೆ, ಎಲ್ಲಾ ಮೃತರ ಕುಟುಂಬಗಳಿಗೆ ನಾನು ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ. ಜೊತೆಗೆ ರಾಜ್ಯ ಸರ್ಕಾರದಿಂದ ಎಲ್ಲಾ ಅಗತ್ಯ ಸಹಾಯ ಮತ್ತು ಪರಿಹಾರವನ್ನು ತಕ್ಷಣವೇ ಒದಗಿಸಲಾಗುವುದು ಎಂದು ತಿಳಿಸಿದರು
