ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಯೋತ್ಪಾದಕರಿಗೆ ಮೂಲ ಸೌಕರ್ಯ ಕಲ್ಪಿಸಲು ಐಎಸ್‌ಐ ಹಣಕಾಸು ಒದಗಿಸುತ್ತಿರುವುದಕ್ಕೆ ಮತ್ತೆ ಸಾಕ್ಷಿ ಲಭ್ಯವಾಗಿದೆ. ಲಷ್ಕರ್-ಎ-ತೈಬಾ ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ನಡುವೆ ಮೈತ್ರಿಗೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಸಹಕಾರ ನೀಡುತ್ತಿರುವುದು ಗುಪ್ತಚರ ದಾಖಲೆಗಳು ಬಹಿರಂಗಪಡಿಸಿವೆ. ಈ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಐಎಸ್‌ಐ ಪಾತ್ರವಿರುವುದು ಸ್ಪಷ್ಟವಾಗಿದೆ. ಬಲೂಚಿಸ್ತಾನದಲ್ಲಿರುವ ಪಾಕಿಸ್ತಾನದ ಮಿಲಿಟರಿ ಸ್ಥಾಪನೆಯು ಭಯೋತ್ಪಾದಕ ಗುಂಪುಗಳನ್ನು ತನ್ನ ರಕ್ಷಣೆಗೆ ಹೇಗೆ ಬಳಸುತ್ತಿದೆ ಎಂಬುದು ಕೂಡ ಇದರಿಂದ ಸಾಬೀತಾಗಿದೆ.
ಇಸ್ಲಾಮಿಕ್ ಸಂಘಟನೆಯಲ್ಲ ಎಂದು ಅಫ್ಘಾನ್ ತಾಲಿಬಾನ್ ತಿರಸ್ಕರಿಸಿರುವ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯವನ್ನು (ಐಎಸ್‌ಕೆಪಿ) ಪಾಕಿಸ್ತಾನ ಭಯೋತ್ಪಾದಕ ನೆಲೆಯಾಗಿ ಪರಿವರ್ತಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ಭಯೋತ್ಪಾದಕ ಕಾರ್ಯಾಚರಣೆಗಳನ್ನು ವಿಸ್ತರಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಿದೆ. ಇದು ದಕ್ಷಿಣ ಏಷ್ಯಾವನ್ನೇ ಅಸ್ಥಿರಗೊಳಿಸಲು ರೂಪಿಸುತ್ತಿರುವ ಆತಂಕಕಾರಿ ಭಯೋತ್ಪಾದನೆಯ ಕೃತ್ಯ ಎಂದು ವರದಿಯೊಂದು ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ)ದ ಬಲೂಚಿಸ್ತಾನ್ ಸಂಯೋಜಕ ಮೀರ್ ಶಫೀಕ್ ಮೆಂಗಲ್, ಲಷ್ಕರ್-ಎ-ತೈಬಾದ ನಾಯಕ ನಜೀಮ್-ಎ-ಅಲಾ ರಾಣಾ ಮೊಹಮ್ಮದ್ ಅಶ್ಫಾಕ್‌ಗೆ ಪಿಸ್ತೂಲ್ ಹಸ್ತಾಂತರಿಸುತ್ತಿರುವುದು ಛಾಯಾಚಿತ್ರದಲ್ಲಿ ಸೆರೆಯಾಗಿದೆ. ಇದು ಇತ್ತೀಚಿನ ಚಿತ್ರವಾಗಿದ್ದು, ಇದೊಂದು ಬಲವಾದ ಪುರಾವೆ ಎನಿಸಿಕೊಂಡಿದೆ. ಈ ಚಿತ್ರವು ಎರಡು ಭಯೋತ್ಪಾದಕ ಗುಂಪುಗಳ ನಡುವಿನ ಸಹಕಾರಕ್ಕೆ ಸಾಕ್ಷಿಯಾಗಿದೆ. ಇದು ಐಎಸ್‌ಐ ಸಹಕಾರದಲ್ಲೇ ನಡೆದಿವೆ ಎಂಬುದನ್ನು ಗುಪ್ತಚರ ಮೂಲಗಳು ತಿಳಿಸಿವೆ.
