ಉದಯವಾಹಿನಿ, ವಾಷಿಂಗ್ಟನ್: ರೆಸ್ಟೋರೆಂಟ್‌ವೊಂದರಲ್ಲಿ ಉಸಿರುಗಟ್ಟುತ್ತಿದ ವ್ಯಕ್ತಿಯನ್ನು ತನ್ನ ಸಮಯಪ್ರಜ್ಞೆಯಿಂದ ಪ್ರೌಢಶಾಲಾ ವಿದ್ಯಾರ್ಥಿನಿ ಹಾಗೂ ಪರಿಚಾರಿಕೆಯಾಗಿರುವ ಹದಿಹರೆಯದ ಹುಡುಗಿಯೊಬ್ಬಳು ರಕ್ಷಿಸಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ. ಅಮೆರಿಕದ ಲೂಸಿಯಾನದಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯದ ವಿಡಿಯೊ ವೈರಲ್ ಆದ ನಂತರ ವಿದ್ಯಾರ್ಥಿನಿಯನ್ನು ಎಲ್ಲರೂ ಅಭಿನಂದಿಸುತ್ತಿದ್ದಾರೆ. ಮಾಸ್ ಬ್ಲಫ್‌ನಲ್ಲಿರುವ ಬುಡಾಟನ್ ಏಷ್ಯನ್ ಕ್ಯುಸಿನ್‌ನಲ್ಲಿ ಈ ಘಟನೆ ಸಂಭವಿಸಿದೆ. ಅಲ್ಲಿ ವಿದ್ಯಾರ್ಥಿನಿ-ಉದ್ಯೋಗಿ ಮ್ಯಾಡಿಸನ್ ಬ್ರೈಡೆಲ್ಸ್ ಎಂಬಾಕೆ ಉಸಿರುಗಟ್ಟುತ್ತಿದ್ದ ವ್ಯಕ್ತಿಯ ಮೇಲೆ ಹೈಮ್ಲಿಚ್ ವಿಧಾನವನ್ನು ಪ್ರದರ್ಶಿಸಿ ಜೀವವನ್ನು ಉಳಿಸಿದ್ದಾಳೆ.
ವೈರಲ್ ಆಗಿರುವ ವಿಡಿಯೊದ ಆರಂಭದಲ್ಲಿ ಮ್ಯಾಡಿಸನ್ ಹ್ಯಾಲೋವೀನ್ ಅಲಂಕಾರಗಳನ್ನು ನೇತುಹಾಕುವಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಈ ವೇಳೆ ಗ್ರಾಹಕರೊಬ್ಬರು ಉಸಿರಾಡಲು ಕಷ್ಟಪಡುತ್ತಿರುವುದನ್ನು ಅವಳು ಗಮನಿಸಿದಳು. ಯಾವುದೇ ಹಿಂಜರಿಕೆಯಿಲ್ಲದೆ ಕೂಡಲೇ ಆತನ ಪಕ್ಕಕ್ಕೆ ಧಾವಿಸಿದ ಬ್ರೈಡೆಲ್ಸ್, ಹೈಮ್ಲಿಚ್ ಕುಶಲತೆಯನ್ನು ಪ್ರದರ್ಶಿಸಿದಳು. ಕೆಲವೇ ಕ್ಷಣಗಳಲ್ಲಿ, ಆ ವ್ಯಕ್ತಿ ಚೇತರಿಸಿಕೊಂಡಿದ್ದಾನೆ.
ಸಿಬ್ಬಂದಿ ಮತ್ತು ಉಳಿದ ಗ್ರಾಹಕರು ಆಶ್ಚರ್ಯದಿಂದ ನೋಡುತ್ತಿದ್ದರೂ, ಏನೂ ಆಗಿಲ್ಲ ಎಂಬಂತೆ ಮ್ಯಾಡಿಸನ್ ಸ್ವಲ್ಪ ಸಮಯದ ನಂತರ ಹೊರಟುಹೋಗಿದ್ದಾಳೆ. ಬ್ರೈಡೆಲ್ಸ್‌ನ ಈ ಸಮಯಪ್ರಜ್ಞೆ ವೈರಲ್ ಆಗಿದ್ದು, ಆಕೆಯ ಧೈರ್ಯ ಮತ್ತು ಹೃದಯವೈಶಾಲ್ಯತೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ನಾನು ನನ್ನನ್ನು ಹೀರೋ ಎಂದು ಭಾವಿಸುವುದಿಲ್ಲ ಎಂದು ಬ್ರೈಡೆಲ್ಸ್ ತಿಳಿಸಿದ್ದಾರೆ. ನಾನು ಯಾರಿಗಾದರೂ ಹಾಗೆ ಮಾಡುತ್ತಿದ್ದೆ ಎಂದು ವಿನಯಪೂರ್ವಕವಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!