ಉದಯವಾಹಿನಿ, ಬೆಂಗಳೂರು : ವೈದ್ಯಕೀಯ, ರಸಾಯನ ಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿಶ್ವದ ಅತ್ಯಂತ ವಿಶಿಷ್ಟ ವ್ಯಕ್ತಿಗಳಿಗೆ ನೊಬೆಲ್ ಪುರಸ್ಕಾರ ನೀಡಲಾಗುತ್ತದೆ. ಭಾರತ-ಪಾಕಿಸ್ತಾನ, ರಷ್ಯಾ-ಉಕ್ರೇನ್ ಇದೀಗ ಇಸ್ರೇಲ್-ಹಮಾಸ್ ನಡುವೆ ಶಾಂತಿ ನೆಲೆಸಲು ತಾನೇ ಕಾರಣ ತಾನೇ ಶಾಂತಿಸ್ಥಾಪಕ ಎಂದು ಬೀಗುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕೆ ಎಂದು ಡಿಜಿಟಲ್ ಸಾಮಾಜಿಕ ಮಾಧ್ಯಮದಲ್ಲಿ ಕೇಳಿದ್ದ ಪ್ರಶ್ನೆಗೆ ಕನ್ನಡಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಆದರೆ ಅದರಲ್ಲಿ ಬಹುತೇಕರು ಟ್ರಂಪ್ಗ್ಯಾಕೆ ಶಾಂತಿ ಪುರಸ್ಕಾರ, ಅವರಿಗೆ ಏನಿದ್ದರೂ ನೀಡಬೇಕಾಗಿರುವುದು ಅಶಾಂತಿ ಪುರಸ್ಕಾರ ಎಂದಿದ್ದಾರೆ. ಕರ್ನಾಟಕದ ಜನರು ಮಾಡಿರುವ ಕೆಲವು ಇಂಟರೆಸ್ಟಿಂಗ್ ಕಮೆಂಟ್ಗಳು ಇಲ್ಲಿವೆ. ಕಿತಾಪತಿಗೆ ಯಾವುದಾದರೂ ಪ್ರಶಸ್ತಿ ಕೊಡುವುದಾದರೆ ಇವರಿಗೆ ಕೊಡಿ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಪ್ರಪಂಚದ ಶಾಂತಿ ಹಾಳು ಮಾಡಿರುವ ಇಂಥವನಿಗೆ ನೊಬೆಲ್ ಪ್ರಶಸ್ತಿ ಬೇರೆ ಬೇಕೇ ಎಂದು ಆಕ್ರೋಶ ಹೊರಹಾಕಿದ್ದಾರೆ. ಹುಚ್ಚರಿಗೆಲ್ಲಾ ನೊಬೆಲ್ ಪ್ರಶಸ್ತಿ ಕೊಟ್ಟರೆ ನೊಬೆಲ್ ಗೌರವಕ್ಕೆ ಧಕ್ಕೆ ತಂದಂತಾಗುತ್ತದೆ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು ಆ ಪ್ರಶಸ್ತಿಯನ್ನೂ ಟ್ರಂಪ್ ಬೆದರಿಸಿ ಪಡೆದುಕೊಳ್ಳಬಹುದು ಎಂದಿದ್ದಾರೆ. ಒಂದು ದೇಶದ ಅಧ್ಯಕ್ಷರಾಗಿ ತನ್ನ ಸ್ವಾರ್ಥಕ್ಕಾಗಿ ಬೇರೆ ಬೇರೆ ದೇಶಗಳ ಹೆಸರನ್ನು ಉಪಯೋಗಿಸಿಕೊಂಡು ಅತಿ ಹೆಚ್ಚು ಸುಳ್ಳು ಹೇಳಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಕೊಡಲೇ ಬೇಕು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಮಂಗನ ಕೈಯಲ್ಲಿ ಮಾಣಿಕ್ಯ ಕೊಡುವುದು ಟ್ರಂಪ್ ಕೈಯಲ್ಲಿ ನೊಬೆಲ್ ಪ್ರಶಸ್ತಿ ಕೊಡುವುದು ಎರಡೂ ಒಂದೆ ಎಂದಿದ್ದಾರೆ. ಮತ್ತೊಬ್ಬರು ಮಾನಸಿಕ ಸ್ಥಿಮಿತ ಕಳೆದುಕೊಂಡರೆ ನೊಬೆಲ್ ಪ್ರಶಸ್ತಿ ಕೊಡಬೇಕು ಅಂತಾನಾ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಇನ್ನೊಬ್ಬರು ನೊಬೆಲ್ ಕುತಂತ್ರಿ ಪ್ರಶಸ್ತಿ ಇದ್ದರೆ ಕೊಡಬಹುದು ಎಂದಿದ್ದಾರೆ. ಅಕ್ಟೋಬರ್ 10ರಂದು ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಗಲಿದೆ.
