ಉದಯವಾಹಿನಿ, ನವದೆಹಲಿ: ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್‌ ಪ್ರಶಸ್ತಿ ಇಂದು ಘೋಷಣೆಯಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಹಂಗೇರಿಯನ್ ಲೇಖಕ ಲಾಸ್ಜ್ಲೋ ಕ್ರಾಸ್ಜ್ನಾಹೋರ್ಕೈ ಅವರಿಗೆ ನೀಡುವುದಾಗಿ ಘೋಷಿಸಿದೆ. ತಮ್ಮ ತಾತ್ವಿಕ ಗದ್ಯಕ್ಕಾಗಿ ಪ್ರಸಿದ್ಧರಾದ ಕ್ರಾಸ್ನಾಹೋರ್ಕೈ, ಆಧುನಿಕ ಸಾಹಿತ್ಯವನ್ನು ಪುನರ್ರೂಪಿಸಿದ್ದಕ್ಕಾಗಿ ನೊಬೆಲ್‌ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ವರ್ಷದ ಸಾಹಿತ್ಯ ನೊಬೆಲ್ ದಕ್ಷಿಣ ಕೊರಿಯಾದ ಕಾದಂಬರಿಕಾರ ಹಾನ್ ಕಾಂಗ್ ಅವರಿಗೆ ಸಂದಿತು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump), ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ (Elon Musk) ಸೇರಿದಂತೆ ಒಟ್ಟು 338 ಅಭ್ಯರ್ಥಿಗಳು 2025ರ ನೊಬೆಲ್ ಶಾಂತಿ ಪ್ರಶಸ್ತಿ ಯ ಕಣದಲ್ಲಿದ್ದಾರೆ. ಶುಕ್ರವಾರ ಯಾರಿಗೆ ಈ ಪ್ರಶಸ್ತಿ ದೊರೆಯಲಿದೆ ಎಂಬುದು ಸ್ಪಷ್ಟವಾಗಲಿದೆ. ವಿಶ್ವದ ಶ್ರೇಷ್ಠ ಶಾಂತಿ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಅವರು ಸಾಕಷ್ಟು ಬಾರಿ ಉಲ್ಲೇಖವನ್ನೂ ಮಾಡಿದ್ದಾರೆ. ಹೀಗಾಗಿ ಈ ಬಗ್ಗೆ ಇದೀಗ ಎಲ್ಲರೂ ಕುತೂಹಲದಿಂದ ಕಾಯುವಂತಾಗಿದೆ. 2025ರ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ ಶುಕ್ರವಾರ ನಡೆಯಲಿದೆ. ಈ ವರ್ಷದ ಶಾಂತಿ ಪ್ರಶಸ್ತಿಗೆ 244 ವ್ಯಕ್ತಿಗಳು ಮತ್ತು 94 ಸಂಸ್ಥೆಗಳು ಸೇರಿದಂತೆ ಒಟ್ಟು 338 ಅಭ್ಯರ್ಥಿಗಳಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ.

ಕಳೆದ ವರ್ಷದ 286 ನಾಮನಿರ್ದೇಶನವಾಗಿದ್ದು,ಈ ಬಾರಿ ಇದು ಮತ್ತಷ್ಟು ಹೆಚ್ಚಳವಾಗಿದೆ. ನಾಮನಿರ್ದೇಶಿತರ ಬಗ್ಗೆ ಸಮಿತಿಯು ಯಾವುದೇ ಮಾಹಿತಿ ನೀಡದೇ ಇದ್ದರೂ ಕೆಲವು ಪ್ರಮುಖರ ಹೆಸರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಬಾರಿ ಡೊನಾಲ್ಡ್ ಟ್ರಂಪ್, ಪೋಪ್ ಫ್ರಾನ್ಸಿಸ್, ಇಮ್ರಾನ್ ಖಾನ್, ಎಲಾನ್ ಮಸ್ಕ್, ಅನ್ವರ್ ಇಬ್ರಾಹಿಂ ಮುಂತಾದವರು ಕಣದಲ್ಲಿದ್ದಾರೆ.
ಜಗತ್ತಿನ ಪ್ರಮುಖ ಹಾಗೂ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ನೊಬೆಲ್‌ ಪ್ರಶಸ್ತಿ ಗಳಿಸಿದ್ದು, ಆರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಸಾಯನ ವಿಜ್ಞಾನ, ಭೌತ ವಿಜ್ಞಾನ, ವೈದ್ಯ ವಿಜ್ಞಾನ, ಶಾಂತಿ, ಅರ್ಥಶಾಸ್ತ್ರ ಹಾಗೂ ಸಾಹಿತ್ಯ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿ ಆಯಾಯ ವಿಷಯದಲ್ಲಿ ನಿಪುಣತೆ ಹೊಂದಿರುವ ಮಹಾನ್ ಸಾಧಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!