ಉದಯವಾಹಿನಿ, ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ, ಅದರಲ್ಲೂ ಬೇರೆ ಊರುಗಳಿಂದ ಬಂದವರ ನಡುವೆ ಲಿವ್‌ ಇನ್‌ ರಿಲೇಷನ್‌ ಶಿಪ್‌ ಹೆಚ್ಚಾಗುತ್ತಿದೆ. ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ಐಟಿ, ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಲ್ಲಿ ಇಂಥ ಸಂಬಂಧಗಳು ಕಂಡುಬರುತ್ತಿದೆ. ವಯಸ್ಸಿಗೆ ಬಂದ ಯುವಕ, ಯುವತಿಯರು ಮದುವೆಯಾಗದೆ ಒಂದೇ ಮನೆಯಲ್ಲಿ ವಾಸಿಸುವ ವ್ಯವಸ್ಥೆಯನ್ನು ಈ ರೀತಿ ಕರೆಯಲಾಗುತ್ತದೆ. ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಇಬ್ಬರು ಪ್ರೇಮಿಗಳ ಸುತ್ತ ನಡೆಯುವ ಕಥಾಹಂದರ ಒಳಗೊಂಡ ಚಿತ್ರದ ಹೆಸರು ಪ್ರೇಮಿಗಳ ಗಮನಕ್ಕೆ. ಸಿಟಾಡಿಲ್ ಫಿಲಂಸ್ ಹಾಗೂ ಜೊಯಿಟಾ ಎಂಟರ್ಟೈನ್ಮೆಂಟ್ಸ್ ಅಡಿ ಸುಬ್ಬು ಹಾಗೂ ಯಕ್ಕಂಟಿ ರಾಜಶೇಖರ ರೆಡ್ಡಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ `ಪ್ರೇಮಿಗಳ ಗಮನಕ್ಕೆʼ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಬಿಗ್‌ಬಾಸ್‌ ಖ್ಯಾತಿಯ ಶಶಿ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದು, ಈಗಾಗಲೇ ಕನ್ನಡ, ತುಳು ಚಿತ್ರಗಳಲ್ಲಿ ನಟಿಸಿರುವ ಚಿರಶ್ರೀ ಅಂಚನ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ, ನಿರ್ಮಾಪಕ ಸುಬ್ಬು ಅವರು ಖಳನಾಯಕನಾಗಿ ಚಿಕ್ಕ ಪಾತ್ರ ನಿರ್ವಹಿಸಿದ್ದಾರೆ. ವಿನ್ಸೆಂಟ್ ಇನ್ಬರಾಜ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಅರುಳ್ ಸೆಲ್ವನ್ ಅವರ ಛಾಯಾಗ್ರಹಣ, ಡೆನ್ನಿಸ್ ವಲ್ಲಭನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಚಿತ್ರದ ಸಹ ನಿರ್ದೇಶಕರಾಗಿ ಕೃಷ್ಣ ಕಾರ್ಯನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!