ಉದಯವಾಹಿನಿ, ನವದೆಹಲಿ: ಭಾರತ ಮಹಿಳಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ ಅವರು ಈಗಾಗಲೇ ಹಲವು ದಾಖಲೆಯನ್ನು ಬರೆದಿದ್ದಾರೆ. ಇದೀಗ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆಯೊಂದನ್ನು ಮುರಿದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್‌ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎನಿಸಿಕೊಳ್ಳುವ ಮೂಲಕ ಅವರು ಆಸ್ಟ್ರೇಲಿಯಾ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್‌ ಅವರ 28 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ವಿಶಾಖಪಟ್ಟಣಂನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2025ರ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ 10ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ದಾಖಲೆಯನ್ನು ಸ್ಮೃತಿ ಮಂಧಾನಾ ಬರೆದಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಮಹಿಳಾ ತಂಡದ ಪರ ಇನಿಂಗ್ಸ್‌ ಆರಂಭಿಸಿದ ಸ್ಮೃತಿ ಮಂಧಾನಾ ಮಂಧಗತಿಯ ಆರಂಭವನ್ನು ಪಡೆದಿದ್ದರು. ನಂತರ ಅಯಾಬಾಂಗಾ ಖಾಕ ಅವರ ಎಸೆತದಲ್ಲಿ ಸಿಕ್ಸರ್‌ ಬಾರಿಸಿದ ಬಳಿಕ ವಿಶ್ವ ದಾಖಲೆಯನ್ನು ಬರೆದರು. ಸಿಕ್ಸರ್‌ ಮೂಲಕ ಅವರು ಆಸ್ಟ್ರೇಲಿಯಾ ಮಾಜಿ ನಾಯಕ ಬೆಲಿಂಡಾ ಕ್ಲಾರ್ಕ್‌ ಅವರ 1997ರ ವರ್ಷದಲ್ಲಿ ಗಳಿಸಿದ್ದ 970 ರನ್‌ಗಳ ವಿಶ್ವ ದಾಖಲೆಯನ್ನು ಹಿಂದಿಕ್ಕಿದರು. ಇದೀಗ ಸ್ಮೃತಿ ಮಂಧಾನಾ ಅವರು 2025ರ ವರ್ಷದಲ್ಲಿ ಆಡಿದ್ದ 17 ಇನಿಂಗ್ಸ್‌ಗಳಿಂದ 57.76ರ ಸರಾಸರಿಯಲ್ಲಿ 982 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಕ್ಯಾಲೆಂಡರ್‌ ವರ್ಷದಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇದರಲ್ಲಿ ಅವರು ನಾಲ್ಕು ಶತಕಗಳು ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!