ಉದಯವಾಹಿನಿ, ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಾರೆ ಟಾಜ್ಮಿನ್ ಬ್ರಿಟ್ಸ್, ಒಂದು ವರ್ಷದಲ್ಲಿ ಐದು ODI ಶತಕಗಳನ್ನು ಗಳಿಸಿದ ಮೊದಲ ಮಹಿಳೆಯಾಗಿ ಇತಿಹಾಸ ನಿರ್ಮಿಸಿದ್ದಾರೆ, ಈ ಮೂಲಕ ಭಾರತದ ಸ್ಮೃತಿ ಮಂಧಾನ ಅವರ ದಾಖಲೆಯನ್ನು ಮುರಿದಿದ್ದಾರೆ. ಆದರೆ, ಈ ಯಶಸ್ಸಿನ ಹಾದಿ ಅವರಿಗೆ ಸುಲಭದ್ದಾಗಿರಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ಗೆ ಜಾವಲಿನ್ ಥ್ರೋವರ್ನಲ್ಲಿ ಅರ್ಹತೆ ಗಳಿಸಿದ ಸಂಭ್ರಮದಲ್ಲಿದ್ದ ಬ್ರಿಟ್ಸ್, ಕಾರ್ ಅಪಘಾತದಿಂದ ಗಂಭೀರ ಗಾಯಗೊಂಡು ಒಲಿಂಪಿಕ್ಸ್ ಕನಸನ್ನ ತ್ಯಜಿಸುವಂತಾಯಿತು. ಆದರೆ ತಮ್ಮ ಅದ್ಭುತ ಚೇತರಿಕೆಯೊಂದಿಗೆ ಕ್ರಿಕೆಟ್‌ನಲ್ಲಿ ಹೊಸ ಎತ್ತರವನ್ನು ತಲುಪಿದ್ದಾರೆ.
ಟಾಜ್ಮಿನ್ ಬ್ರಿಟ್ಸ್ ಒಮ್ಮೆ ಜಾವೆಲಿನ್ ಥ್ರೋನಲ್ಲಿ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದ ಅವರು, ಈ ಸಾಧನೆಯ ಸಂಭ್ರಮಾಚರಣೆಗಾಗಿ ಕಾರ್ ಓಡಿಸುತ್ತಿದ್ದಾಗ ಭೀಕರ ಅಪಘಾತಕ್ಕೀಡಾದರು. ಚಾಲನೆಯ ವೇಳೆ ಒಂದು ಕ್ಷಣ ಮೊಬೈಲ್ ಫೋನ್‌ಗೆ ಗಮನ ಕೊಟ್ಟದ್ದು ದುರಂತಕ್ಕೆ ಕಾರಣವಾಯಿತು.
ಈ ಅಪಘಾತದಲ್ಲಿ ಬ್ರಿಟ್ಸ್‌ಗೆ ಬೆನ್ನುಮೂಳೆ ಮುರಿದು, ಮೂತ್ರಕೋಶದ ಹಾನಿ ಮತ್ತು ಆಂತರಿಕ ರಕ್ತಸ್ರಾವವಾಯಿತು. ಈ ಗಾಯಗಳಿಂದ ಚೇತರಿಕೆ ಅಸಾಧ್ಯವೆಂದೇ ತೋರುತ್ತಿತ್ತು, ಆದರೆ ಅವರ ತಂದೆ-ತಾಯಿಯ ಬೆಂಬಲ, ಫಿಸಿಯೋಥೆರಪಿಸ್ಟ್‌ಗಳು ಮತ್ತು ಮನಶಾಸ್ತ್ರಜ್ಞರ ಸಹಾಯದಿಂದ ಬ್ರಿಟ್ಸ್ ಒಂದು ವರ್ಷದ ಚಿಕಿತ್ಸೆಯ ನಂತರ ಮತ್ತೆ ನಡೆಯಲು ಆರಂಭಿಸಿದರು.
ಅಪಘಾತದ ನಂತರ ಜಾವೆಲಿನ್ ಥ್ರೋಗೆ ಮರಳಲಾಗದ ಬ್ರಿಟ್ಸ್, ಕ್ರಿಕೆಟ್‌ನತ್ತ ಗಮನ ಹರಿಸಿದರು. ಫಿಟ್‌ನೆಸ್ ಮರಳಿ ಪಡೆದ ನಂತರ, ಅವರ ಬ್ಯಾಟಿಂಗ್ ಕೌಶಲ್ಯವು ದಕ್ಷಿಣ ಆಫ್ರಿಕಾದ ಎಮರ್ಜಿಂಗ್ ಪ್ಲೇಯರ್ಸ್ ತಂಡಕ್ಕೆ 2018ರಲ್ಲಿ ಆಯ್ಕೆಯಾಗಲು ಕಾರಣವಾಯಿತು. ಅಂದಿನಿಂದ, ಬ್ರಿಟ್ಸ್ ಒಂದರ ನಂತರ ಒಂದರಂತೆ ಮೈಲಿಗಲ್ಲುಗಳನ್ನು ದಾಟಿದ್ದಾರೆ. ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾಕ್ಕಾಗಿ ಚೊಚ್ಚಿಲ ಪಂದ್ಯವಾಡಿದ ಅವರು, 14 T20I ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಒಲಿಂಪಿಕ್ ರಿಂಗ್ ಟ್ಯಾಟೂ ಹಾಕಿಸಿಕೊಂಡಿರುವ ಬ್ರಿಟ್ಸ್, ತಮ್ಮ ಜೀವನದ ಎರಡನೇ ಅವಕಾಶವನ್ನು ಪೂರ್ಣವಾಗಿ ಬಳಸಿಕೊಂಡಿದ್ದಾರೆ.
