ಉದಯವಾಹಿನಿ, ಹಾಸನ: ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಜಿಲ್ಲಾಡಳಿತದ ಶಿಷ್ಟಾಚಾರದ ಪ್ರಕಾರವೇ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ವಾಹನದಲ್ಲಿ ಆಗಮಿಸಿ ಹಾಸನಾಂಬ ದೇವಿ ದರ್ಶನ ಪಡೆದರು. ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹಾಸನಾಂಬ ದರ್ಶನ ಪಡೆಯಲು ಜಿಲ್ಲೆ, ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಅವರೆಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ. ರೈತಾಪಿ, ಗ್ರಾಮೀಣ ಭಾಗದ ಜನಕ್ಕೆ ಕಾಲ ಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಅನುಕೂಲವಾದ ವಾತಾವರಣವನ್ನು ಆ ತಾಯಿ ಅನುಗ್ರಹಿಸಲಿ. ಈ ಬಾರಿಯ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ, ಶಿಸ್ತಾಗಿ ನಡೆಯುತ್ತಿದೆ. ಇದೇ ರೀತಿ ಮುಂದುವರೆಯಲಿ ಎಂದರು.
ಹದಿಮೂರು ದಿನ ತಾಯಿ ದರ್ಶನವಿರುತ್ತದೆ. ಅದಕ್ಕೆ ಎಲ್ಲಾ ರೀತಿಯ ಅವಕಾಶ ಮಾಡಿಕೊಟ್ಟಿದ್ದಾರೆ. ಜನ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಗೊಂದಲ, ಘರ್ಷಣೆ ಇಲ್ಲದೇ ದೇವಿ ದರ್ಶನ ಪಡೆಯಿರಿ ಎಂದರು. ವಿಶೇಷವಾಗಿ ನಮ್ಮ ಜಿಲ್ಲೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿ. ನಾನು ಶಿಷ್ಟಾಚಾರದ ವ್ಯವಸ್ಥೆಯಲ್ಲಿಯೇ ಬಂದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು. ಜಿಲ್ಲಾಡಳಿತ ಏನು ವ್ಯವಸ್ಥೆ ಮಾಡಿದೆ ನಾವು ಕೂಡ ಅದನ್ನು ಪಾಲಿಸಿದ್ದೇವೆ ಎಂದಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು (H.D Deve Gowda) ಚೆನ್ನಾಗಿ ಇದ್ದಾರೆ. ಇನ್ನೂ ಎರಡು, ಮೂರು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ.
