ಉದಯವಾಹಿನಿ, ನವದೆಹಲಿ: ಪಾಕಿಸ್ತಾನಕ್ಕೆ ಯಾವುದೇ ಹೊಸ ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು ನೀಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹೆಚ್ಚಳವಾಗುತ್ತಿದ್ದಂತೆ ಪಾಕಿಸ್ತಾನಕ್ಕೆ AMRAAMs ಕ್ಷಿಪಣಿಯನ್ನು ಅಮೆರಿಕ ನೀಡಲಿದೆ ಎಂದು ವರದಿಯಾಗಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಭಾರತದಲ್ಲಿರುವ ರಾಯಭಾರ ಕಚೇರಿ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವು ತಿಳಿಸಿದೆ.
ಪಾಕಿಸ್ತಾನವು ಅಮೆರಿಕದಿಂದ AIM-120 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು ಪಡೆಯುವ ಸಾಧ್ಯತೆಯಿದೆ. ಟ್ರಂಪ್ ಅವಧಿಯಲ್ಲಿ ಯುದ್ಧ ಇಲಾಖೆಯಾಗಿ ಬದಲಾಗಿರುವ ಅಮೆರಿಕದ ರಕ್ಷಣಾ ಇಲಾಖೆ ಕ್ಷಿಪಣಿ ಖರೀದಿಸುವ ಒಟ್ಟು 35 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು. ಅಮೆರಿಕ ರಾಯಭಾರ ಕಚೇರಿ ಪ್ರತಿಕ್ರಿಯಿಸಿ, ಈ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿರುವ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದಕ್ಕೆ ಮಾಡಲಾಗಿರುವ ತಿದ್ದುಪಡಿಯಾಗಿದೆ ಎಂದು ಹೇಳಿದೆ.
