ಉದಯವಾಹಿನಿ, ದೆಹಲಿ: ಕರ್ವಾ ಚೌತ್ ಹಬ್ಬದ ಮುನ್ನಾದಿನವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಿಸಲು ಮಹಿಳೆಯರ ಗುಂಪೊಂದು ಒಟ್ಟುಗೂಡಿದ ಸುಂದರ ದೃಶ್ಯವೊಂದು ಪಶ್ಚಿಮ ದೆಹಲಿಯಲ್ಲಿ ಕಂಡುಬಂತು. ಇದರ ವಿಡಿಯೊ ವೈರಲ್ ಆಗಿದೆ. ಸಾಂಪ್ರದಾಯಿಕವಾಗಿ, ಕರ್ವಾ ಚೌತ್ ಒಂದು ಪವಿತ್ರ ಹಬ್ಬವಾಗಿದ್ದು, ವಿವಾಹಿತ ಮಹಿಳೆಯರು ಸೂರ್ಯೋದಯದಿಂದ ಚಂದ್ರೋದಯದವರೆಗೆ ಉಪವಾಸ ಮಾಡುತ್ತಾರೆ. ತಮ್ಮ ಗಂಡಂದಿರ ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ. ಆದರೆ, ಉಪವಾಸ ದಿನ ಪ್ರಾರಂಭವಾಗುವ ಮೊದಲು, ಮಹಿಳೆಯರು ಮೆಹಂದಿ ಹಚ್ಚಲು, ನಗು ಹಂಚಿಕೊಳ್ಳಲು ಮತ್ತು ಮುಂದಿನ ಆಚರಣೆಗಳಿಗೆ ಸಿದ್ಧರಾಗಲು ಒಟ್ಟಾಗಿ ಸೇರುತ್ತಾರೆ.
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೊ ಒಂದು ಮಿಲಿಯನ್‍ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದರಲ್ಲಿ ಮಹಿಳೆಯರ ಗುಂಪೊಂದು ವೃತ್ತಾಕಾರವಾಗಿ ಕುಳಿತು, ಕೈಗಳಲ್ಲಿ ಗೋರಂಟಿ (ಮೆಹಂದಿ) ವಿನ್ಯಾಸಗಳಿಂದ ಅಲಂಕರಿಸಿಕೊಂಡು, ಹರಟೆ ಹೊಡೆಯುತ್ತಾ, ನಗುತ್ತಾ, ಹಬ್ಬದ ವಾತಾವರಣವನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಆದರೆ, ಈ ಖುಷಿಯ ನಡುವೆ ಇನ್ನೊಂದು ತಿರುವು ಪಡೆದುಕೊಂಡಿದೆ. ಮಹಿಳೆಯರು ತಮ್ಮ ಕೈಗಳಿಗೆ ಮೆಹಂದಿಯನ್ನು ಹಚ್ಚುವುದಕ್ಕಾಗಿ ಕುಳಿತುಕೊಂಡಾಗ, ವ್ಯಕ್ತಿಯೊಬ್ಬ ಹುಕ್ಕಾ ಸೇದಲು ಅವರಿಗೆ ಸಹಾಯ ಮಾಡಿದ್ದಾನೆ.
