ಉದಯವಾಹಿನಿ, ಫಿಲಿಪೈನ್ಸ್: ಫಿಲಿಪೈನ್ಸ್‌ನಲ್ಲಿ ಇಂದು ಬೆಳ್ಳಂ ಬೆಳಗ್ಗೆ 7.6 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಪ್ರಬಲ ಭೂಕಂಪದ ಕಾರಣ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಉಂಟಾಗುವ ಭೀತಿ ಎದುರಾಗಿದೆ. ಪರಿಣಾಮವಾಗಿ ಕರಾವಳಿ ಪ್ರದೇಶದ ಜನರನ್ನು ಸ್ಥಳಾಂತರಿಸಲು ಸೂಚನೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (ಫಿವೊಲ್ಕ್ಸ್) ಮಾಹಿತಿ ನೀಡಿದ್ದು, ಮಿಂಡಾನಾವೊದ ದಾವೊ ಓರಿಯಂಟಲ್‌ನಲ್ಲಿರುವ ಮನಾಯ್ ಪಟ್ಟಣದ ಬಳಿ 10 ಕಿ.ಮೀ ಆಳದಲ್ಲಿ ಕಡಲಾಚೆಯ ಭೂಕಂಪ ಸಂಭವಿಸಿದೆ. ಇನ್ನು ದುರ್ಘಟನೆಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.
ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‌ನ ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆಯಾಗಿ ಎತ್ತರದ ಪ್ರದೇಶಗಳಿಗೆ ಅಥವಾ ಒಳನಾಡಿಗೆ ಸ್ಥಳಾಂತರಗೊಳ್ಳುವಂತೆ ಫಿವೊಲ್ಕ್ಸ್ ಸೂಚನೆ ನೀಡಿದೆ. ಏತನ್ಮಧ್ಯೆ, ಹವಾಯಿಯಲ್ಲಿರುವ ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಭೂಕಂಪದ ಕೇಂದ್ರಬಿಂದುವಿನಿಂದ 186 ಮೈಲುಗಳ ಒಳಗೆ ಅಪಾಯಕಾರಿ ಅಲೆಗಳು ಸಂಭವಿಸಬಹುದು ಎಂದು ಹೇಳಿದೆ. ಫಿಲಿಪೈನ್ಸ್ ಕರಾವಳಿಯ ಕೆಲವು ಭಾಗಗಳಲ್ಲಿ 3 ಮೀಟರ್ ಎತ್ತರದ ಅಲೆಗಳು ಹಾಗೂ ಇಂಡೋನೇಷ್ಯಾ ಮತ್ತು ಪಲಾವ್‌ನಲ್ಲಿ ಸಣ್ಣ ಅಲೆಗಳು ಸಂಭವಿಸುವ ಸಾಧ್ಯತೆಯಿದೆ.
ಭೂಕಂಪ ಸಂಭವಿಸಿದಾಗ ಜನರು ಭಯಭೀತರಾಗಿದ್ದು, ಕೆಲವು ಕಟ್ಟಡಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ” ಎಂದು ಎಡ್ವಿನ್ ಜುಬಾಹಿಬ್ ಸ್ಥಳೀಯ ಮಾಧ್ಯಮಗಳಿಗೆ ಹೇಳಿರುವುದಾಗಿ ರಾಯಿಟರ್ಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ. ಇನ್ನು ಭೂಮಿ ಕಂಪಿಸಿದ ಅನುಭವಾಗುತ್ತಿದ್ದಂತೆ ಜನ ಭೀತಿಯಿಂದ ಓಡುತ್ತಿರುವ ವಿಡಿಯೊಗಳು ಆಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
