ಉದಯವಾಹಿನಿ, ನವದೆಹಲಿ: ಅಫ್ಘಾನಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಾಲಿಬಾನ್‌ ಸರ್ಕಾರದ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಖಿ ಭಾರತ ಭೇಟಿಯಲ್ಲಿದ್ದಾರೆ. ಇಂದು ಅವರು ಭಾರತದ ವಿದೇಶಾಂ ಸಚಿವ ಜೈಶಂಕರ್‌ ಅವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದು, ಕಾಬೂಲ್‌ನಲ್ಲಿ ರಾಯಭಾರ ಕಚೇರಿ ಮತ್ತೆ ತೆರೆಯಲು ಭಾರತ ಮುಂದಾಗಿದೆ. ಆ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನದೊಂದಿಗಿನ ಸಂಬಂಧವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಉಭಯ ನಾಯಕರು ಇಂದು ದೆಹಲಿಯಲ್ಲಿ ಮಹತ್ವದ ಚರ್ಚೆ ನಡೆಸಿದ್ದು, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಐತಿಹಾಸಿಕವಾದುದು ಮತ್ತು ನೈಸರ್ಗಿಕ ವಿಕೋಪಗಳು ಸೇರಿದಂತೆ ಯಾವುದೇ ತೊಂದರೆ ಎದುರಾದಾಗಲೆಲ್ಲಾ ಅಫ್ಘಾನ್ ಜನರಿಗೆ ಭಾರತ ಯಾವಾಗಲೂ ಸಹಾಯ ಮಾಡಿದೆ ಎಂದು ಜೈಶಂಕರ್ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಅವರಿಗೆ ತಿಳಿಸಿದರು.
ಭಾರತವು ಅಫ್ಘಾನಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಜೈಶಂಕರ್ ಹೇಳಿದರು.
ಅಫ್ಘಾನಿಸ್ತಾನ ಸರ್ಕಾರದ ಜೊತೆಗಿನ ಸುದೀರ್ಘ ಹೋರಾಟದ ನಂತರ 2021ರಲ್ಲಿ ತಾಲಿಬಾನ್‌ ಸಂಘಟನೆ ಕಾಬೂಲ್‌ ಅನ್ನು ವಶಕ್ಕೆ ಪಡೆದ ನಂತರ ಭಾರತ ತನ್ನ ರಾಯಭಾರ ಕಚೇರಿ ಮತ್ತು ದೂತವಾಸಗಳನ್ನು ಮುಚ್ಚಲಾಗಿತ್ತು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ತಾಲಿಬಾನ್‌ ಸಚಿವರೊಬ್ಬರು ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಅಫ್ಘಾನಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳ ಪುನಃಸ್ಥಾಪನೆಯು ಭಾರತದ ನೆರೆಹೊರೆಯ ರಾಜತಾಂತ್ರಿಕತೆಯಲ್ಲಿ ನಿರ್ಣಾಯಕ ಕ್ಷಣವಾಗಿದೆ.

Leave a Reply

Your email address will not be published. Required fields are marked *

error: Content is protected !!