ಉದಯವಾಹಿನಿ, ಎಸ್ ಆರ್ ಸನತ್ ಕುಮಾರ್ ಅವರು ನಿರ್ಮಿಸುತ್ತಿರುವ, ವಿ.ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನೂ ಮಾಡುತ್ತಿರುವ, ವಿ.ಎಂ.ರಾಜು ಮತ್ತು ನೀಲ್ ಕೆಂಗಾಪುರ ಜಂಟಿಯಾಗಿ ನಿರ್ದೇಶಿಸುತ್ತಿರುವ ಹಾಗೂ ಹೆಚ್.ಎಂ ರೇವಣ್ಣ ಅವರ ಪುತ್ರ ಅನೂಪ್ ರೇವಣ್ಣ ನಾಯಕನಾಗಿ ನಟಿಸುತ್ತಿರುವ ‘ಕನಕರಾಜ’ ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮಿ ಲೇಔಟ್ ನ ಪ್ರಸನ್ನ ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಆರಂಭ ಫಲಕ ತೋರಿದರು. ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ಅವರು ಕ್ಯಾಮೆರಾ ಚಾಲನೆ ಮಾಡಿದರು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್ ಕೆ ವಿಶ್ವನಾಥ್ ಸೇರಿದಂತೆ ಮುಂತಾದ ಚಿತ್ರರಂಗದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇಂದಿನ ಸಮಾರಂಭಕ್ಕೆ ಆಗಮಿಸಿರುವ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಮಾತನಾಡಿದ ನಿರ್ಮಾಪಕ ಸನತ್ ಕುಮಾರ್, ” ಕನಕರಾಜ” ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಆರನೇ ಚಿತ್ರ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಕನಕರಾಜ ಚಿತ್ರದಲ್ಲೂ ಯುವಜನತೆಗೆ ಉತ್ತಮ ಸಂದೇಶವಿದೆ. ನಮ್ಮ ರಾಜ್ಯದ ವಿವಿಧ ಊರುಗಳಲ್ಲಿ, ಪಕ್ಕದ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲೂ ಈ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕ ಸನತ್ ಕುಮಾರ್ ತಿಳಿಸಿದರು.
