ಉದಯವಾಹಿನಿ, ನವದೆಹಲಿ: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ ಮಧ್ಯದಲ್ಲಿ ನಡಯಲಿದೆ ಹಾಗೂ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಸಲ್ಲಿಸಲು ನವೆಂಬರ್‌ನಲ್ಲಿ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಕ್ರಿಕ್‌ಬಝ್ ವರದಿಯ ಪ್ರಕಾರ, ಮಿನಿ ಹರಾಜು ಪ್ರಕ್ರಿಯೆಯು ಡಿಸೆಂಬರ್ 13 ರಿಂದ 14ರ ಒಳಗೆ ನಡೆಯಬಹುದು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ಫ್ರಾಂಚೈಸಿಗಳ ಅಧಿಕಾರಿಗಳು ಮೇಲಿನ ದಿನಾಂಕಗಳ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ. ಆದರೆ, ಅಧಿಕೃತವಾಗಿ ಐಪಿಎಲ್ ಕೌನ್ಸಿಲ್ ಪ್ರಕಟಣೆಯನ್ನು ಹೊರಡಿಸುವುದು ಬಾಕಿ ಇದೆ.
ಕಳೆದ 2025ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆಯನ್ನು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಸಲಾಗಿತ್ತು. ಭಾರತದಿಂದ ಹೊರಗಡೆ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ನಡೆಸಿದ್ದು ಇದೇ ಮೊದಲು. 2026ರ ಐಪಿಎಲ್ ಮಿನಿ ಹರಾಜು ದೇಶದಲ್ಲಿಯೇ ನಡೆಯಲಿದೆ ಎಂದು ನಂಬಲಾಗಿದೆ. ಈ ಬಾರಿ ವಿದೇಶದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಲು ಬಿಸಿಸಿಐಗೆ ಆಸಕ್ತಿ ಇಲ್ಲ ಎಂದು ತಿಳಿದುಬಂದಿದೆ.
ಆಟಗಾರರನ್ನುಉಳಿಸಿಕೊಂಡ ಹಾಗೂ ರಿಲೀಸ್ ಮಾಡಿದ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ಎಲ್ಲಾ ಫ್ರಾಂಚೈಸಿಗಳಿಗೆ ನವೆಂಬರ್ 15ಕ್ಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಆಟಗಾರರನ್ನು ಉಳಿಸಿಕೊಳ್ಳುವ ಅವಧಿ ನಿರ್ಣಾಯಕವಾಗಿರುತ್ತದೆ, ಏಕೆಂದರೆ ಹಲವು ದೊಡ್ಡ ಹಣದ ಒಪ್ಪಂದಗಳನ್ನು ಬಿಡುಗಡೆ ಮಾಡುವುದರಿಂದ ಹಣವನ್ನು ಮುಕ್ತಗೊಳಿಸಲು ಮತ್ತು ತಂಡಗಳಲ್ಲಿನ ಪ್ರಮುಖ ಕ್ಷೇತ್ರಗಳನ್ನು ಬಲಪಡಿಸಲು ಇದರಿಂದ ಸಾಧ್ಯವಾಗುತ್ತದೆ. ಕೋಲ್ಕತ್ತಾ ನೈಟ್ ರೈಡರ್ಸ್‌ನ ವೆಂಕಟೇಶ್ ಅಯ್ಯರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಟಿ. ನಟರಾಜನ್ ಸೇರಿದಂತೆ ಇತರ ಆಟಗಾರರ ಭವಿಷ್ಯ ಪರಿಶೀಲನೆಯಲ್ಲಿದೆ.
