ಉದಯವಾಹಿನಿ,ಹೊಸದಿಲ್ಲಿ: 2024ರ ಲೋಕಸಭಾ ಚುನಾವಣೆ ಹಾಗೂ ವಿವಿಧ ರಾಜ್ಯಗಳು ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿಯ ಸಂಘಟನೆಯಲ್ಲಿ ಭಾರೀ ಬದಲಾವಣೆ ತಂದಿದೆ. ನಾಲ್ಕು ರಾಜ್ಯಗಳ ಬಿಜೆಪಿ ಘಟಕದ ಅಧ್ಯಕ್ಷರನ್ನು ಬದಲಾಯಿಸಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಆದೇಶ ಹೊರಡಿಸಿದ್ದಾರೆ. ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದ್ದು, ಬಂಡಿ ಸಂಜಯ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ. ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಆಂಧ್ರ ಪ್ರದೇಶದ ಮಾಜಿ ಸಿಎಂ ಎನ್‌ಟಿಆರ್ ಅವರ ಪುತ್ರಿ ಡಿ ಪುರಂದೇಶ್ವರಿ ಅವರನ್ನು ನೇಮಿಸಲಾಗಿದೆ.
ಜಾರ್ಖಂಡ್ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಸಿಎಂ ಬಾಬುಲಾಲ್ ಮರಂಡಿ ಅವರನ್ನು ನೇಮಿಸಲಾಗಿದೆ. ಇನ್ನು, ಪಂಜಾಬ್ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಸುನೀಲ್ ಜಾಕರ್ ಅವರನ್ನು ನೇಮಿಸಲಾಗಿದೆ. ವಿಶೇಷವೇನೆಂದರೆ ಈ ಹಿಂದೆ ಸುನೀಲ್ ಜಾಕರ್ ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 2022ರ ಮೇನಲ್ಲಿ ನಡೆದ ಪಂಜಾಬ್ ಚುನಾವಣೆ ವೇಳೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಏಥಲ್ ರಾಜೇಂದ್ರ ಅವರನ್ನು ತೆಲಂಗಾಣ ಬಿಜೆಪಿಯ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.
