ಉದಯವಾಹಿನಿ, ನವದೆಹಲಿ: ಮರದಲ್ಲಿ ಗೆಜ್ಜೆಯಂತೆ ತೂಗುತ್ತಿರುವ ಹುಣಸೆಹಣ್ಣನ್ನು ನೋಡಿ ಬಾಯಲ್ಲಿ ನೀರೂರಿಸಿಕೊಂಡವರೆಷ್ಟು ಮಂದಿಯಿಲ್ಲ? ಮರದ ಗೆಲ್ಲು ಬಗ್ಗಿಸಿ ಜೋತಾಡಿದವರು, ಕೈಗೆಟುಕದೇ ಇದ್ದಿದ್ದಕ್ಕೆ ಕಲ್ಲು ಬೀರಿದವರು, ಕೋಲು ಬೀಸಿದವರು- ಹುಣಸೆ ಹಣ್ಣಿನ ಆಸೆಗಾಗಿ ಮರ ಹತ್ತಿ ಕೊಯ್ದವರು, ಬಿದ್ದು ಕಾಲು ಮುರಿದುಕೊಂಡವರು- ಎಂಥೆಂಥವರಿಲ್ಲ! ಹುಣಸೆ ಮರದ ದೆವ್ವಗಳ ಕಥೆ ಕೇಳಿದ ಮೇಲೂ ಹುಣಸೆ ಹಣ್ಣಿನ ಆಸೆ ಬಿಟ್ಟವರುಂಟೆ? ಕಾಯಿದ್ದಾಗ ಹುಚ್ಚು ಹುಳಿ, ಹಣ್ಣಾದ ಮೇಲೆ ಸ್ವಲ್ಪ ಸಿಹಿ ಉಳಿದಷ್ಟೂ ಹುಳಿ ರುಚಿಯ ಈ ಹಣ್ಣು ತಿನ್ನುವುದಕ್ಕೆ ಆಸೆ ಪಡದವರೆ ವಿರಳ ಎನ್ನಬಹುದು. ಇದು ಬರೀ ಬಾಯಿ ರುಚಿಗೆ ತಿನ್ನುವ ಮಾತಲ್ಲ, ಹೆಚ್ಚಿನ ಉಪಯೋಗಗಳಿವೆ.
ಭಾರತೀಯ ಅಡುಗೆ ಮನೆಗಳಲ್ಲಿ ಇರಲೇಬೇಕಾದ ವ್ಯಂಜನಗಳ ಪೈಕಿ ಹುಣಸೆ ಹಣ್ನು ಸಹ ಒಂದು. ಅದರಲ್ಲೂ ದಕ್ಷಿಣ ಭಾರತೀಯ ಅಡುಗೆಗಳಲ್ಲಿ ತಿಳಿಸಾರು, ಹುಳಿ, ಗೊಜ್ಜು, ಚಟ್ನಿ, ಪುಳಿಯೋಗರೆ ಗಳಿಂದ ಹಿಡಿದು ಬಹಳಷ್ಟು ಅಡುಗೆಗಳನ್ನು ರುಚಿಗಟ್ಟಿಸುವುದಕ್ಕೆ ಹುಣಸೆಹುಳಿ ಬೇಕೆಬೇಕು. ಇವೆಲ್ಲ ರುಚಿಯ ಮಾತಾಯಿತು. ಇಷ್ಟೊಂದು ವ್ಯಾಪಕವಾಗಿ ಬಳಕೆಯಲ್ಲಿರುವ ಈ ಹಣ್ಣಿಗೆ ಆರೋಗ್ಯದ ದೃಷ್ಟಿಯಿಂದ ಒಂದಿಷ್ಟು ಸದ್ಗುಣಗಳು ಇರಲೇ ಬೇಕಲ್ಲವೇ? ದೊಡ್ಡ ಮಟ್ಟದಲ್ಲಿ ಇದನ್ನು ಬೆಳೆಯಲಾಗುತ್ತಿದೆ ಎಂದಾದರೆ ಅಷ್ಟು ಉಪಯೋಗವೂ ಇರಬೇಕು. ಪರಂಪರಾಗತ ಔಷಧಿಯಲ್ಲಿ ಹುಣಸೆಹಣ್ಣು ಮಾತ್ರವಲ್ಲ, ಇಡೀ ಮರವೇ ಬಳಕೆಯಲ್ಲಿದೆ. ಏನೀ ಹಣ್ಣಿನ ಪ್ರಯೋಜನಗಳು?
ರೋಗ ನಿರೋಧಕತೆ: ಇದರಲ್ಲಿರುವ ಹುಳಿ ರುಚಿಯ ಟಾರ್ಟಾರಿಕ್ ಆಮ್ಲವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಉತ್ಕರ್ಷಣ ನಿರೋಧಕ ಗುಣವೂ ಇದ್ದು, ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ತೂಕ ಇಳಿಕೆಗೆ ನೆರವು: ಇದರಲ್ಲಿ ನಾರಿನಂಶ ಹೇರಳವಾಗಿದೆ. ಹಾಗಾಗಿ ಜೀರ್ಣಾಂಗವನ್ನು ಸ್ವಚ್ಛ ಗೊಳಿಸಿ, ಪಚನದ ಕೆಲಸವನ್ನು ಸರಿ ಮಾಡುತ್ತದೆ. ಜೊತೆಗೆ, ಇದರಲ್ಲಿರುವ ಫ್ಲೆವನಾಯ್ಡ್ ಮತ್ತು ಪಾಲಿಫೆನಾಲ್‌ಗಳು ದೇಹದ ತೂಕ ಇಳಿಸುವುದಕ್ಕೂ ನೆರವಾಗುತ್ತವೆ. ಇದರಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲವು ಹಸಿವೆಯನ್ನು ಕಡಿಮೆ ಮಾಡುತ್ತದೆ.
